Latest

ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕೈ ನಾಯಕ ಸೈಕಲ್ ಜಾಥಾ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಸೈಕಲ್ ಜಾಥಾ ನಡೆಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಸೈಕಲ್, ಜಟಕಾ ಗಾಡಿ ಇನ್ನಿತರ ವಾಹನಗಳಲ್ಲಿ ಆಗಮಿಸಿ ಆದಾಯ ತೆರಿಗೆ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತೈಲಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಇದು ಕೇವಲ ಸಾಂಕೇತಿಕ ಮುಷ್ಕರ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಸ್ವಲ್ಪಮಟ್ಟಿನ ಇಂದಿನ ಬೆಲೆ ಏರಿಕೆಯಾದರೆ ಬಿಜೆಪಿ ಪಕ್ಷ ಬೀದಿಗಿಳಿದು ಹೋರಾಡುತ್ತಿತ್ತು. ನರೇಂದ್ರ ಮೋದಿ 2014ರ ಅಧಿಕಾರಕ್ಕೆ ಬಂದು ಆರು ವರ್ಷ ಆಡಳಿತ ನಡೆಸಿದ್ದಾರೆ. ಒಂದು ಪೆಟ್ರೋಲ್ ರೇಟ್ ಹೇರಿಕೆಗೆ ಕಚ್ಚಾತೈಲ ಬೆಲೆ ಏರಿಕೆ ಕಾರಣವಾಗಿತ್ತು. ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿತ್ತು. 1 ಬ್ಯಾರೆಲ್ ಗೆ 120 ರಿಂದ 130 ಡಾಲರ್ ಬೆಲೆ ಇತ್ತು. ಇದರಿಂದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಒಂದೆರಡು ಬಾರಿ ಅಲ್ಪಪ್ರಮಾಣದ ಬೆಲೆ ಏರಿಕೆ ಮಾಡಿತ್ತು. ರೈತರಿಗೆ, ಬಡವರಿಗೆ, ಮಧ್ಯಮ ವರ್ಗದವರಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಸಬ್ಸಿಡಿ ನೀಡಿ ಬೆಲೆ ಏರಿಕೆ ಮಾಡುತ್ತಿದ್ದರು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬೆಲೆ ಏರಿಕೆ ಮಾಡಿದ್ದರು ಎಂದು ವಿವರಿಸಿದರು.

ಪ್ರಧಾನಿ ಮೋದಿ ಒಮ್ಮೆ ಹಿಂತಿರುಗಿ ನೋಡಬೇಕು. ದೇಶದ ಜನ ಇಂದು ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳಬೇಕು. ಕಚ್ಚಾತೈಲ ಬೆಲೆ 30ರಿಂದ 40 ಡಾಲರ್ ಮಟ್ಟಕ್ಕೆ ಇಳಿದಿದೆ. 20 ಡಾಲರ್ ಗೂ ಇಳಿದಿತ್ತು. ಆದರೆ ಮೋದಿ ಸರ್ಕಾರ ದಿನೇ ದಿನೇ ಇಂಧನ ಬೆಲೆ ಹೆಚ್ಚಿಸುತ್ತಿದೆ. ಸಾಮಾನ್ಯ ನಾಗರಿಕರ ರಕ್ತವನ್ನು ಹೀರಿ ಸರ್ಕಾರದ ಬೊಕ್ಕಸ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ದೇಶದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಇರಬೇಕಿದ್ದ ಬೆಲೆ ಅತಿ ಹೆಚ್ಚು ಮೊತ್ತಕ್ಕೆ ಏರಿದೆ. ದೆಹಯಲ್ಲಿ ಇಂದು ಪೆಟ್ರೋಲ್ ಬೆಲೆಗಿಂತ ಡೀಸೆಲ್ ಬೆಲೆ ಹೆಚ್ಚಾಗುವ ಸ್ಥಿತಿ ನಿರ್ಮಾಣವಾಗಿದೆ. ವಾಹನ ನಡೆಸುವವರ ರಕ್ತವನ್ನು ಹೀರಿ ತಾನು ಉದ್ಧಾರವಾಗುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕೇವಲ ತೆರಿಗೆಯನ್ನು ಹೆಚ್ಚಿಸಿ ಹಣ ವಸೂಲಿ ಮಾಡುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ. ಕೋವಿಡ್ ದೊಡ್ಡ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ. ರೋಗವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಗುಡುಗಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button