Kannada NewsKarnataka NewsLatest

ಫೋಟೋಗ್ರಾಫರ್ ಕೊಲೆ: ಖಾನಾಪುರ ಪೊಲೀಸರಿಂದ ಐವರ ಬಂಧನ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕಳೆದ ಡಿ.೨೫ರಂದು ನಡೆದ ತಾಲೂಕಿನ ಜಾಂಬೋಟಿ ಗ್ರಾಮದ ಫೋಟೋಗ್ರಾಫರ್ ಕೊಲೆ ಪ್ರಕರಣವನ್ನು ಬೇಧಿಸಿದ ಖಾನಾಪುರ ಪೊಲೀಸರು ಗುರುವಾರ ಒಟ್ಟು ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಘಟನೆಯ ವಿವರ
ಕಳೆದ ಹಲವು ವರ್ಷಗಳಿಂದ ಜಾಂಬೋಟಿ ಗ್ರಾಮದಲ್ಲಿ ಫೋಟೋಗ್ರಾಫರ್ ವಿಜಯ ಅವಲಕ್ಕಿ ತಮ್ಮದೊಂದು ಸ್ವಂತ ಫೋಟೋ ಸ್ಟುಡಿಯೋ ಇಟ್ಟುಕೊಂಡಿದ್ದರು. ತಮ್ಮ ಫೋಟೋ ಸ್ಟುಡಿಯೋದಲ್ಲಿ ಅದೇ ಗ್ರಾಮದ ರಾಮಚಂದ್ರ ಬಾಬುರಾವ್ ಕಾಂಬಳೆ ಎಂಬಾತನನ್ನು ತಮ್ಮ ಸಹಾಯಕನಾಗಿ ನೇಮಿಸಿಕೊಂಡಿದ್ದರು.

ಇತ್ತೀಚಿನ ಕೆಲ ದಿನಗಳಿಂದ ಹಣಕಾಸು ಮತ್ತು ಕೆಲ ವೈಯುಕ್ತಿಕ ವಿಷಯಗಳಲ್ಲಿ ರಾಮಚಂದ್ರ ಮತ್ತು ವಿಜಯ ಅವರ ನಡುವೆ ಮನಸ್ತಾಪ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ವಿಜಯ ಅವರು ನವಂಬರ್ ತಿಂಗಳಲ್ಲಿ ರಾಮಚಂದ್ರನನ್ನು ಕೆಲಸದಿಂದ ತೆಗೆದುಹಾಕಿದ್ದರು.

ಇದೇ ಕಾರಣದಿಂದ ವಿಜಯ ಅವರ ಮೇಲೆ ದ್ವೇಷ ಇಟ್ಟುಕೊಂಡಿದ್ದ. ರಾಮಚಂದ್ರ ಡಿ.೨೫ರಂದು ಸಂಜೆ ವಿಜಯ ಅವರನ್ನು ಬರ್ತಡೇ ಫೋಟೋ ತೆಗೆಯುವ ಆರ್ಡರ್ ಇದೆ ಎಂದು ಹೇಳಿ ಮನೆಯಿಂದ ತಾಲೂಕಿನ ಚಿಕಲೆ ಅರಣ್ಯಕ್ಕೆ ಕರೆದೊಯ್ದಿದ್ದ. ಅಲ್ಲಿ ಮೊದಲೇ ನಿರ್ಧರಿಸಿದಂತೆ ತನ್ನ ಹಲವು ಸ್ನೇಹಿತರೊಂದಿಗೆ ಸೇರಿ ವಿಜಯ ಅವರ ರುಂಡ-ಮುಂಡ ಬೇರ್ಪಡಿಸಿ ಬರ್ಬರವಾಗಿ ಹತ್ಯೆಗೈದಿದ್ದ.

ಇತ್ತ ಫೋಟೋಗ್ರಾಫಿ ಕೆಲಸಕ್ಕಾಗಿ ಮನೆಯಿಂದ ತೆರಳಿದ್ದ ವಿಜಯ ಎರಡು ದಿನಗಳಾದರೂ ಮರಳಿ ಮನೆಗೆ ಬಾರದ್ದರಿಂದ ಅವರಿಗಾಗಿ ಹುಡುಕಾಟ ನಡೆಸಿದ ಅವರ ಕುಟುಂಬದ ಸದಸ್ಯರು ಡಿ.೨೭ರಂದು ಅವರ ನಾಪತ್ತೆ ಬಗ್ಗೆ ಖಾನಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅವಲಕ್ಕಿ ಅವರ ಕುಟುಂಬದ ಸದಸ್ಯರಿಂದ ದೂರು ಸ್ವೀಕರಿಸಿದ ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು ಮೊದಲು ಸಂಶಯಾಸ್ಪದ ಆರೋಪಿ ರಾಮಚಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಜಯ ಅವರ ಕೊಲೆ ಪ್ರಕರಣದ ವಿವರ ಬೆಳಕಿಗೆ ಬಂದಿದೆ.

ಬಳಿಕ ರಾಮಚಂದ್ರನನ್ನು ಕರೆದುಕೊಂಡು ಕೊಲೆ ಮಾಡಿದ ಮತ್ತು ಶವ ಹೂತುಹಾಕಿದ ಸ್ಥಳಗಳಿಗೆ ತೆರಳಿ ತನಿಖೆ ಕೈಗೊಂಡಿದ್ದು, ವಿಜಯ ಅವರ ಹೂತುಹಾಕಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಕೈಗೊಂಡಿದ್ದಾರೆ.

ರಾಮಚಂದ್ರ ನೀಡಿದ ಮಾಹಿತಿ ಮೇರೆಗೆ ವಿಜಯ ಅವರ ಕೊಲೆಗೆ ಸಹಾಯ ಮಾಡಿದ ಇನ್ನೂ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಖಾನಾಪುರ ಸಿ.ಪಿ.ಐ ಸುರೇಶ ಶಿಂಗಿ, ಪಿ.ಎಸ್.ಐ ಬಸಗೌಡ ಪಾಟೀಲ ಮತ್ತು ಸಿಬ್ಬಂದಿ ಕೊಲೆ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button