Kannada NewsKarnataka NewsLatest

ಸ್ಮಾರ್ಟ್ ಆಗಲಿವೆ ಬೆಳಗಾವಿಯ ಅಂಗನವಾಡಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಗರದಲ್ಲಿರುವ ಅಂಗನವಾಡಿಗಳನ್ನು ಉನ್ನತೀಕರಣಗೊಳಿಸಲು ನಿರ್ಧರಿಸಲಾಗಿದೆ.

43 ಅಂಗನವಾಡಿಗಳ ಸಮಗ್ರ ಅಭಿವೃದ್ಧಿ ಮತ್ತು 190 ಅಂಗನವಾಡಿಗಳಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸಲು ಮೊದಲ ಹಂತದಲ್ಲಿ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸುಮಾರು 4.40 ಕೋಟಿ ರೂ.ಗಳನ್ನು ವಿನಿಯೊಗಿಸಲಾಗುತ್ತಿದೆ ಎಂದು ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ ತಿಳಿಸಿದ್ದಾರೆ.

ಅಂಗನವಾಡಿಗಳ ಈಗಿನ ಸ್ಥಿತಿ

ನಗರದಲ್ಲಿರುವ ಬಹುತೇಕ ಅಂಗನವಾಡಿಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಅಲ್ಲಿಲ್ಲ. ಸುರಕ್ಷತೆಯ ದೃಷ್ಟಿಯಿಂದಲೂ ಸೂಕ್ತವಾಗಿಲ್ಲ. ಮಕ್ಕಳ ಆಟಿಕೆಗೆ ಬೋಕಾದ ಸಾಮಗ್ರಿಗಳಿಲ್ಲ. ಆರೋಗ್ಯದ ಹಿನ್ನೆಲೆಯಲ್ಲಿ ಯೋಚಿಸಿದರೂ ಅಸುರಕ್ಷಿತವಾಗಿದೆ.

ಇದನ್ನೆಲ್ಲ ಗಮನಿಸಿ ಅಂಗನವಾಡಿಗಳನ್ನು ಆರೋಗ್ಯಕರವಾಗಿ, ಸುರಕ್ಷಿತವಾಗಿ ಮತ್ತು ಮಕ್ಕಳ ಕಲಿಕೆಗೆ ಪೂರಕವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಅಂಗನವಾಡಿಗಳನ್ನು ಜಾಗತಿಕ ಮಟ್ಟದಲ್ಲಿ ಉನ್ನತೀಕರಿಸುವುದು ಯೋಜನೆಯ ಉದ್ದೇಶವಾಗಿದೆ.

ಶಶಿಧರ ಕುರೇರ, ಸ್ಮಾರ್ಟ್ ಸಿಟಿ ಎಂ.ಡಿ.

ಮೊದಲ ಹಂತದಲ್ಲಿ ನಗರದ 43 ಸರಕಾರಿ ಅಂಗನವಾಡಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಇವುಗಳಲ್ಲಿ 10 ಅಂಗನವಾಡಿಗಳಲ್ಲಿ ಶೌಚಾಲಯವೂ ಇಲ್ಲದಿರುವುದರಿಂದ ಶೌಚಾಲಯ ನಿರ್ಮಾಣಕ್ಕೆ ಸಹ ನಿರ್ಧರಿಸಲಾಗಿದೆ.

ನಗರದಲ್ಲಿ ಒಟ್ಟೂ ಸರಕಾರಿ ಮತ್ತು ಖಾಸಗಿ ಸೇರಿ 370 ಅಂಗನವಾಡಿಗಳಿವೆ. ಇವುಗಳಲ್ಲಿ ಇತರ 190 ಅಂಗನವಾಡಿಗಳಿಗೆ ಆಟಿಗೆ ಸಾಮಗ್ರಿ, ಅಡುಗೆ ಸಾಮಗ್ರಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಪೂರೈಸಲಾಗುತ್ತಿದೆ. ಜೊತೆಗೆ ಪೇಂಟಿಂಗ್, ಕಿಟಕಿ, ಶೌಚಾಲಯ ಹಾಗೂ ನೀರಿನ ಟ್ಯಾಂಕ್ ಗಳ ದುರಸ್ತಿ ಸಹ ಮಾಡಲಾಗುತ್ತದೆ.

ಸಿವಿಲ್ ಮತ್ತು ಎಲೆಕ್ಟ್ರಿಕಲ್ ಕೆಲಸಗಳಿಗಾಗಿ 2.14 ಕೋಟಿ ರೂ. ಹಾಗೂ ಇತರ ಸಾಮಗ್ರಿಗಳ ಪೂರೈಕೆಗೆ 2.25 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಕುರೇರ ತಿಳಿಸಿದ್ದಾರೆ.

ಒಟ್ಟಾರೆ, ಮಕ್ಕಳ ಆರಂಭಿಕ ಶಿಕ್ಷಣವನ್ನು ಸುಂದರ ಹಾಗೂ ಸಶಕ್ತೀಕರಣಗೊಳಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಿರುವುದು ಮಾದರಿ ಯೋಜನೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button