ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತದ ಗಾನ ಕೋಗಿಲೆ ಎಂದೇ ಪ್ರಸಿದ್ಧವಾಗಿದ್ದ ಲತಾ ಮಂಗೇಶ್ಕರ್ ನಿಧನಕ್ಕೆ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಲತಾ ಮಂಗೇಶ್ಕರ್ ಅವರ ಅಗಲಿಕೆ ಮಾತಿನಲ್ಲಿ ಹೇಳಲಾಗದಷ್ಟು ದು:ಖ ತಂದಿದೆ ಎಂದಿದ್ದಾರೆ.
ದಯೆ, ಕಾಳಜಿ ಇರುವ ಲತಾ ದೀದಿ ನಮ್ಮನ್ನು ಅಗಲಿದ್ದಾರೆ. ದೇಶಕ್ಕೆ ತುಂಬಲಾರದ ನಷ್ಟ. ಮುಂಬರುವ ಪೀಳಿಗೆಗೆ ಅವರನ್ನು ಭಾರತೀಯ ಸಂಸ್ಕೃತಿಯ ನಿಷ್ಠಾವಂತ ವ್ಯಕ್ತಿ ಎಂದು ನೆನಪಿಸಿಕೊಳ್ಳುತ್ತದೆ. ಅವರ ಮಧುರ ಧ್ವನಿ ಜನರನ್ನು ಮಂತ್ರಮುಗ್ಧಗೊಳಿಸುವ ಅಪ್ರತಿಮ ಸಾಮರ್ಥ್ಯವನ್ನು ಹೊಂದಿತ್ತು ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ದಶಕಗಳ ಕಾಲ ಭಾರತೀಯ ಚಲನಚಿತ್ರ ಪ್ರಪಂಚದ ಸ್ಥಿತ್ಯಂತರಗಳನ್ನು ಅವರು ನಿಕಟವಾಗಿ ಗಮನಿಸಿದ್ದರು. ಸಿನಿಮಾಗಳಾಚೆಗೂ ಅವರು ಯಾವಾಗಲೂ ಭಾರತದ ಬೆಳವಣಿಗೆ ಬಗ್ಗೆ ಉತ್ಸುಕರಾಗಿದ್ದರು. ಯಾವಾಗಲೂ ಬಲಿಷ್ಠ, ಅಭಿವೃದ್ಧಿ ಹೊಂದಿದ ಭಾರತವನ್ನು ನೋಡಲು ಬಯಸುತ್ತಿದ್ದರು. ಲತಾ ಮಂಗೇಶ್ಕರ್ ಅವರನ್ನು ಕಳೆದುಕೊಂಡು ಇಡೀ ದೇಶ ದು:ಖಿತವಾಗಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದವರಿಗೆ ದು:ಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.
ಭಾರತ ರತ್ನ, ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ; ಬೆಳ್ಳನೆ ಬೆಳಗಾಯಿತೋ ಎಂದ ಗಾನ ಕೋಗಿಲೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ