ಕೊರೊನಾ ಸೋಂಕನ್ನು ನಾವು ಸಮರ್ಥವಾಗಿ ಎದುರಿಸುತ್ತಿದ್ದೇವೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸೋಂಕನ್ನು ನಾವು ಸಮರ್ಥವಾಗಿ ಎದುರಿಸಿದ್ದೇವೆ. ಆದರೆ ದೇಶದಲ್ಲಿ ವಲಸೆ ಕಾರ್ಮಿಕರಿಂದ ಕೊಂಚ ತೊಂದರೆಯಾಗಿದೆ. ದುರಂತವಾಗಿ ಪರಿವರ್ತನೆಯಾಗದಂತೆ ನೋಡಿಕೊಳ್ಳಬೇಕು ಹೀಗಾಗಿ ನಿಯಮ, ಮಾರ್ಗಸೂಚಿಗಳನ್ನು ಭಾರತೀಯರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಸತತ ಎರಡನೇ ಬಾರಿ ಅಧಿಕಾರಕ್ಕೆ ಬಂದು ಇಂದಿಗೆ 1 ವರ್ಷ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ದೇಶದ ಜನತೆಗೆ ಆಡಿಯೋ ಸಂದೇಶ ರವಾನಿಸಿರುವ ಪ್ರಧಾನಿ ಕೊರೊನಾ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ದೇಶದ ಜನತೆಗೆ ಧೈರ್ಯ ತುಂಬಿದರು. ಇದೇ ವೇಳೆ ತಮ್ಮ ಆಡಳಿತದ ಸಾಧನೆಯನ್ನು ಹೇಳಿಕೊಂಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತಂದಿದ್ದು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಆರ್ಟಿಕಲ್ ಅನ್ನು ತೆಗೆದುಹಾಕಿದ್ದು, ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೆ ತಂದಿದ್ದು, ರಾಮ ಮಂದಿರ ಸಮಸ್ಯೆ ಇತ್ಯರ್ಥಪಡಿಸಿದ್ದು ಇವು ಒಂದು ವರ್ಷದ ಅವಧಿಯಲ್ಲಿ ತಮ್ಮ ಸರ್ಕಾರದ ಪ್ರಮುಖ ಸಾಧನೆ ಎಂದರು.

ಕೊರೊನಾ ವೈರಸ್ ನ್ನು ನಾವು ಯಶಸ್ವಿಯಾಗಿ ಎದುರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವು ತಾಳ್ಮೆ ಪ್ರದರ್ಶಿಸಿದ್ದೇವೆ. ಇದನ್ನು ಮುಂದುವರೆಸೋಣ. ಬೇರೆ ದೇಶಗಳಿಗಿಂತ ಭಾರತದ ಸ್ಥಿತಿ ಉತ್ತಮವಾಗಿದೆ. ಆತ್ಮ ನಿರ್ಭಯ ಅಭಿಯಾನಕ್ಕೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದೇವೆ ಎಂದು ಹೇಳಿದರು.

ಇದ್ದೇ ವೇಳೆ ಪ್ರಧಾನಿ ಮೋದಿ ದೇಶದ ಜನತೆಗೆ ಪತ್ರವೊಂದನ್ನು ಕೂಡ ಬರೆದಿದ್ದಾರೆ. ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಕಾಪಾಡಲು ಜನರು ನಮಗೆ ಬೆಂಬಲ ನೀಡಿದ್ದಕ್ಕೆ ಈ ಸಂದರ್ಭದಲ್ಲಿ 130 ಕೋಟಿ ಭಾರತೀಯರಿಗೆ ಆಭಾರಿ. ಸಾಮಾನ್ಯ ದಿನಗಳಲ್ಲಾದರೆ ಇಂದು ನಾನು ನಿಮ್ಮ ಮಧ್ಯೆ ಇದ್ದು ಸಂಭ್ರಮಾಚರಣೆ ಮಾಡುತ್ತಿದ್ದೆ. ಆದರೆ ಇಂದು ಕೊರೋನಾದಿಂದಾಗಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಹೀಗಾಗಿ ನಿಮ್ಮೆಲ್ಲರನ್ನು ಉದ್ದೇಶಿಸಿ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಪ್ರೀತಿ, ಹಾರೈಕೆ, ಸಹಕಾರ ನಮಗೆ ಹೊಸ ಶಕ್ತಿ, ಉತ್ಸಾಹ ನೀಡುತ್ತದೆ. ಪ್ರಜಾಪ್ರಭುತ್ವದ ಒಟ್ಟು ಶಕ್ತಿಯನ್ನು ನೀವು ತೋರಿಸುತ್ತಿರುವುದು ಇಡೀ ಜಗತ್ತಿಗೆ ಹೊಸ ಬೆಳಕಾಗಿದೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button