
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಧೋನಿಯವರಿಗೆ ಪತ್ರ ಬರೆದಿದ್ದು, ಧೋನಿಯವರ ಸಾಧನೆ, ತಾಳ್ಮೆ, ಧೈರ್ಯವನ್ನು ಕೊಂಡಾಡಿದ್ದಾರೆ.
ಎಂಎಸ್ ಧೋನಿಯವರು ಅಗಸ್ಟ್ 15ರಂದು ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಈ ವಿಚಾರವಾಗಿ ಧೋನಿಯವರಿಗೆ ಪತ್ರ ಬರೆದಿರುವ ಪ್ರಧಾನಿ ಮೋದಿಯವರು, ಧೋನಿಯವರು ಭಾರತದ ಕ್ರಿಕೆಟ್‍ಗೆ ನೀಡಿದ ಕೊಡುಗೆ ಅದ್ಭುತ. ಕ್ರಿಕೆಟ್‍ನಲ್ಲಿ ಧೋನಿಯವರನ್ನು ಇಷ್ಟಪಡದ ವ್ಯಕ್ತಿಯಿಲ್ಲ. ಭಾರತೀಯ ಸೇನೆಯ ಮೇಲೆ ಅವರಿಗೆ ಇರುವ ಪ್ರೀತಿ ಅಪಾರವಾದದ್ದು ಎಂದು ಶ್ಲಾಘಿಸಿದ್ದಾರೆ.
ಧೋನಿಯವರು ಸಣ್ಣ ಪಟ್ಟಣದಲ್ಲಿ ಹುಟ್ಟಿ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ರಾಷ್ಟ್ರಕ್ಕಾಗಿ ಒಳ್ಳೆಯ ಸಾಧನೆಯನ್ನು ಮಾಡಿದ್ದಾರೆ. ಈಗಿನ ಯುವಜನತೆ ಸ್ಪೂರ್ತಿಯಾಗಿದ್ದಾರೆ. ಧೋನಿಯವರ ಸಾಧನೆಯನ್ನು 130 ಕೋಟಿ ಭಾರತೀಯರು ಮೆಚ್ಚಿಕೊಳ್ಳಬೇಕು ಎಂದಿದ್ದಾರೆ.
ಒಬ್ಬ ಆಟಗಾರನ ಹೇರ್‍ಸ್ಟೈಲ್ ಹೇಗಿದೆ ಎಂಬುದು ಮುಖ್ಯವಲ್ಲ. ಸೋಲು ಮತ್ತು ಗೆಲುವುಗಳ ಮಧ್ಯೆ ಆಟಗಾರ ಎಷ್ಟು ತಾಳ್ಮೆಯಿಂದ ಇರುತ್ತಾನೆ ಎಂಬುದು ಮುಖ್ಯವಾಗುತ್ತದೆ. ಈಗಿನ ಯುವ ಜನತೆ ಒತ್ತಡ ಪರಿಸ್ಥಿತಿಯಲ್ಲೂ ಧೋನಿಯವರಂತೆ ತಾಳ್ಮೆಯಿಂದ ಇರುವುದನ್ನು ಕಲಿತುಕೊಳ್ಳಬೇಕು. ನೀವು ತಂಡವನ್ನು ಮುನ್ನಡೆಸುತ್ತಿದ್ದ ರೀತಿ ಮತ್ತು ನಿಮ್ಮ ಧೈರ್ಯವನ್ನು ಎಲ್ಲರೂ ಮೆಚ್ಚಲೇಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಪತ್ರವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿರುವ ಧೋನಿ, ನಿಮ್ಮ ಮೆಚ್ಚುಗೆ ಹಾಗೂ ಶುಭಾಷಯಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ