ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿರುವುದಕ್ಕೆ ಬಡವರು ಸೇರಿದಂತೆ ಹಲವರಿಗೆ ತೊಂದರೆಯಾಗುತ್ತಿದೆ. ಕೆಲವರು ನನ್ನ ಮೇಲೆ ಕೋಪಗೊಂಡಿರಬಹುದು. ಆದರೆ ಕೊರೊನಾ ವೈರಸ್ ನಂತಹ ರಣಾಂತಿಕ ರೋಗದಿಂದ ದೇಶದ ಎಲ್ಲರ ರಕ್ಷಣೆಗಾಗಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್-19 ವಿರುದ್ಧದ ಯುದ್ಧವು ಕಠಿಣವಾದದ್ದು ಮತ್ತು ಅದಕ್ಕೆ ಲಾಕ್ ಡೌನ್ ನಂತಹ ಕಠಿಣ ನಿರ್ಧಾರಗಳು ಅಗತ್ಯವಾಗಿದೆ. ಭಾರತದ ಜನರನ್ನು ಸುರಕ್ಷಿತವಾಗಿಡುವುದು ಸರ್ಕಾರದ ಮುಖ್ಯ ಉದ್ದೇಶ. ಈ ಕಠಿಣ ನಿರ್ಧಾರಕ್ಕೆ ಕ್ಷಮೆಯಿರಲಿ. ಸಮಸ್ಯೆಗಳು ಅಥವಾ ರೋಗಗಳು ಹೆಚ್ಚುವ ಮೊದಲೆ ನಾವು ಕ್ರಮ ಕೈಗೊಳ್ಳಬೇಕು. ಕೊರೋನಾ ವೈರಸ್ ಎಲ್ಲರಿಗೂ ಹಾನಿ ಉಂಟು ಮಾಡುತ್ತಿದೆ. ಈ ವೈರಸ್ ವಿರುದ್ಧ ಎಲ್ಲರೂ ಹೋರಾಡಬೇಕಿದೆ ಎಂದು ಕರೆ ನೀಡಿದರು.
ಯಾರೂ ಉದ್ದೇಶಪೂರ್ವಕವಾಗಿ ಲಾಕ್‍ಡೌನ್ ಘೋಷಣೆಯನ್ನು ಮುರಿಯಲು ಬಯಸುವುದಿಲ್ಲ. ಆದರೆ ಕೆಲವರು ಲಾಕ್‍ಡೌನ್ ನಡುವೆಯೂ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಅಂತವರಿಂದ ಕೊರೊವಾ ವೈರಸ್ ಮತ್ತಷ್ಟು ಹೆಚ್ಚಾಗುತ್ತಿದ್ದು, ನಮ್ಮನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದರು.
ಕೊರೊನಾ ವೈರಸ್ ವಿರುದ್ಧ ಹೋರಾಡುವ ಸೈನಿಕರು, ಪೊಲೀಸರು, ನಮ್ಮ ಸಹೋದರ, ಸಹೋದರಿಯರಾದ ದಾದಿಯರು, ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ನಮಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೀವು ಅವರ ಸೇವೆ, ತ್ಯಾಗವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಯಾವುದೇ ಲಾಭ ಅಪೇಕ್ಷಿಸದೆ ರೋಗಿಗಳಿಗೆ ಸೇವೆ ಸಲ್ಲಿಸುವವರು ಅತ್ಯುತ್ತಮ ವೈದ್ಯ ಎಂದು ಆಚಾರ್ಯ ಚರಕ್ ಹೇಳಿದ್ದಾರೆ. ಅಂತಹ ಪ್ರತಿಯೊಬ್ಬ ದಾದಿಯರಿಗೆ ನಾನು ಇಂದು ನಮಸ್ಕರಿಸುತ್ತೇನೆ. ನೀವೆಲ್ಲರೂ ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತಿದ್ದೀರಿ. ವಿಶ್ವವು 2020ಅನ್ನು ನರ್ಸ್, ವೈದ್ಯಕೀಯ ಸಿಬ್ಬಂದಿಯ ಅಂತರರಾಷ್ಟ್ರೀಯ ವರ್ಷವಾಗಿ ಆಚರಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ ಜತೆ ದೂರವಾಣಿ ಮೂಲಕ ಮಾತನಾಡಿದ ಆಗ್ರಾದ ಅಶೋಕ್ ಕಪೂರ್ ಅವರು, ತಮ್ಮ ಇಡೀ ಕುಟುಂಬದ ಆರು ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಎಲ್ಲರೂ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇವೆ. ನಮಗೆ ಚಿಕಿತ್ಸೆ ನೀಡಿದ ವೈದ್ಯರು, ಅಧಿಕಾರಿಗಳು ಹಾಗೂ ಸರ್ಕಾರಿ ಸಿಬ್ಬಂದಿಗೆ ಧನ್ಯವಾದ ತಿಳಿಸಲು ಇಚ್ಛಿಸುತ್ತೇವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ