ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇಡೀ ದೇಶ ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದೆ. ಕೊರೊನಾ ನಿಯಂತ್ರಿಸುವಲ್ಲಿ ದೇಶ ಯಶಸ್ವಿಯಾಗುತ್ತಿದೆ. ಆದಾಗ್ಯೂ ನಾವು ಕೊರೊನಾ ವೈರಸ್‌ನ್ನು ಹಗುರವಾಗಿ ಪರಿಗಣಿಸಬಾರದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತವನ್ನು ಆತ್ಮ ನಿರ್ಭರವನ್ನಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ದೇಶದ ಜನರ ಭಾಗಿಧಾರಿಕೆ ಮಹತ್ತರವಾದದ್ದು, ಕೊರೊನಾ ಸೋಂಕಿನ ವಿರುದ್ಧ ನಾವು ಒಟ್ಟಾಗಿ ಹೋರಾಡಬೇಕು. ದೇಶದ ಜನರು ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಕೈಗಳನ್ನು ಸ್ಯಾನಿಟೈಸ್ ನಿಂದ ತೊಳೆದುಕೊಳ್ಳಿ. ನಿರಂತರ ಮಾಸ್ಕ್ ಧರಿಸುವುದು ಕಷ್ಟವಾಗುತ್ತದೆ ಆದರೆ ಒಮ್ಮೆ ವೈದ್ಯರನ್ನು ನೆನೆಸಿಕೊಳ್ಳಿ. ದೇಶಾದ್ಯಂತ ವೈದ್ಯರು ಗಂಟೆಗಟ್ಟಲೆ ಮಾಸ್ಕ್, ಪಿಪಿಇ ಕಿಟ್ ಗಳನ್ನು ಧರಿಸಿ ನಿರಂತರವಾಗಿ ಕೆಲಸಮಾಡುತ್ತಿದ್ದಾರೆ. ಸೋಂಕಿತರನ್ನು ಗುಣಪಡಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದಾರೆ ಎಂದರು.
ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ವಿರುದ್ಧ ಹೋರಾಟ ಮುಂದುವರೆಸೋಣ. ದೇಶದ ಜನತೆ ಸ್ವಾವಲಂಭಿಗಳಗಾಬೇಕಾದ ಅನಿವಾರ್ಯತೆಯಿದೆ. ಸ್ವಾಲಂಭಿ ಬದುಕಿಗೆ ಲಡಾಖ್ ಜನರು ಮಾದರಿ. ದೇಶದಲ್ಲಿ ಉತ್ಪಾದನೆ ಹೆಚ್ಚಾಗಬೇಕಿದೆ. ಸ್ವಾವಲಂಭಿ ಭಾರತಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.
ಇಂದು ಕಾರ್ಗಿಲ್ ವಿಜಯ್ ದಿವಸ್ 21ನೇ ವರ್ಷಾಚರಣೆ. ಅಂದು ಭಾರತ ಕಾರ್ಗಿಲ್ ಯುದ್ಧ ಗೆದ್ದು ತನ್ನ ಶಕ್ತಿ ತೋರಿಸಿತ್ತು. ಕಾರ್ಗಿಲ್ ವಿಜಯವನ್ನು ಭಾರತೀಯರು ಎಂದೂ ಮರೆಯುವುದಿಲ್ಲ. ಕಾರ್ಗಿಲ್ ಯುದ್ಧ ನಮಗೆ ಹಲವು ಪಾಠಗಳನ್ನು ಕಲಿಸಿದೆ. ನಮ್ಮ ವೀರ ಯೋಧರು ಪಾಕಿಸ್ತಾನವನ್ನು ಧ್ವಂಸ ಮಾಡಿದ್ದರು. ಭಾರತದ ರಕ್ಷಣಾ ಶಕ್ತಿಯನ್ನು ಇಡೀ ವಿಶ್ವಕ್ಕೆ ಪರಿಚಯ ಮಾಡಿಸಿದ ವೀರರಿಗೆ ನನ್ನ ನಮನ ಎಂದು ಹೇಳಿದ್ದಾರೆ.
ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳೊಂದಿಗೆ ನೇರವಾಗಿ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ