Kannada NewsKarnataka NewsLatestTravel

*ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿದ ಪ್ರಧಾನಿ ಮೋದಿ*: *ದೇಶದ 2ನೇ ಅತಿ ದೊಡ್ಡ ಮೆಟ್ರೋ ಜಾಲ ಎಂಬ ಕೀರ್ತಿ ಪಡೆದ ನಮ್ಮ ಮೆಟ್ರೋ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಮಾಡಿದರು. ಈ ಮೂಲಕ ನಮ್ಮ ಮೆಟ್ರೋ ರೈಲು ಹೊಸ ಮೈಲು ಸ್ಥಾಪಿಸಿದಂತಾಗಿದೆ.

ಬೆಂಗಳೂರಿನ ಎಸ್‌ಜಿ ಪಾಳ್ಯ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, 7.5 ಕಿ.ಮೀ. ಉದ್ದದ ಪಿಂಕ್‌ಲೈನ್ ಮೆಟ್ರೋ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು.

ಈ ಐತಿಹಾಸಿಕ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲೆ ಡಾ. ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಕೃಷ್ಣ ಬೈರೇಗೌಡ ಹಾಗೂ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ಹೊಸ ಮೈಲುಗಲ್ಲು:
ಪಿಂಕ್ ಲೈನ್‌ನ 7.5 ಕಿ.ಮೀ. ಮಾರ್ಗ ಇಂದು ಲೋಕಾರ್ಪಣೆಯಾಗುತ್ತಿದ್ದಂತೆಯೇ ನಮ್ಮ ಮೆಟ್ರೋ ಮತ್ತೊಂದು ಮೈಲಿಗಲ್ಲು ತಲುಪಿದೆ. ಒಟ್ಟು 103.6 ಕಿ.ಮೀ. ಜಾಲದೊಂದಿಗೆ ಬೆಂಗಳೂರು ನಗರವು ಮುಂಬೈಯನ್ನು ಹಿಂದಿಕ್ಕಿ ದೆಹಲಿಯ ನಂತರದ ಸ್ಥಾನಕ್ಕೇರಿದೆ. ಅಂದರೆ, ಎರಡನೇ ಸ್ಥಾನ ಪಡೆದಿದೆ.

ದೆಹಲಿ ಮೆಟ್ರೋ 374.5 ಕಿ.ಮೀ. ಜಾಲದೊಂದಿಗೆ ಮೊದಲ ಸ್ಥಾನದಲ್ಲಿದೆ. ಮುಂಬೈನಲ್ಲಿ 102 ಕಿ.ಮೀ. (ಮುಂಬೈ 91 ಕಿ.ಮೀ., ನವಿ ಮುಂಬೈ 11.1 ಕಿ.ಮೀ.) ಮೆಟ್ರೋ ಮಾರ್ಗವಿದೆ. ನಂತರದ ಸ್ಥಾನಗಳಲ್ಲಿ ಕೋಲ್ಕತ್ತಾ (73–74 ಕಿ.ಮೀ.), ಹೈದರಾಬಾದ್ (69), ಚೆನ್ನೈ (68.7), ಅಹಮದಾಬಾದ್–ಗಾಂಧಿನಗರ (65), ನಾಗ್ಪುರ (38.2) ಮತ್ತು ಪುಣೆ (33 ಕಿ.ಮೀ.) ಇವೆ. ನಮ್ಮ ಮೆಟ್ರೋಗಿಂತ ಮೊದಲೇ ಆರಂಭವಾದ ಹಲವು ನಗರಗಳನ್ನು ಬೆಂಗಳೂರು ಮೀರಿಸಿದ್ದು, ಅತಿ ವೇಗವಾಗಿ ಬೆಳೆದ ಮೆಟ್ರೋ ಎಂಬ ಖ್ಯಾತಿಯೂ ಇದರದ್ದಾಗಿದೆ.

ಟಿಕೆಟ್ ದರ:
ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರದವರೆಗಿನ ಈ ಮಾರ್ಗದಲ್ಲಿ ಆರು ನಿಲ್ದಾಣಗಳಿದ್ದು, ₹3,470 ಕೋಟಿ ವೆಚ್ಚವಾಗಿದೆ. ನವೆಂಬರ್ 14ರ ಬೆಳಗ್ಗೆ 6ರಿಂದ ವಾಣಿಜ್ಯ ಸಂಚಾರ ಆರಂಭವಾಗಲಿದ್ದು, ಐದು ರೈಲುಗಳು ಸುಮಾರು 8 ನಿಮಿಷಕ್ಕೊಂದರಂತೆ ಸಂಚರಿಸಲಿವೆ. ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರಕ್ಕೆ ₹30, ಹುಳಿಮಾವು ಅಥವಾ ಐಐಎಂಬಿ (ಬಿಳೇಕಹಳ್ಳಿ)ವರೆಗೆ ₹20, ಎನ್.ಎಸ್. ಪಾಳ್ಯ–ಜೆ.ಪಿ. ನಗರ 4ನೇ ಹಂತದವರೆಗೆ ₹10 ದರ ನಿಗದಿಯಾಗಿದೆ.

ಪಿಂಕ್ ಲೈನ್‌ ವಿಶೇಷತೆ:

ಒಟ್ಟು 21.26 ಕಿ.ಮೀ. ಉದ್ದದ ಪಿಂಕ್ ಲೈನ್‌ನಲ್ಲಿ ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 18 ನಿಲ್ದಾಣಗಳಿರಲಿದ್ದು, 12 ಅಂಡರ್​ಗ್ರೌಂಡ್ ಹಾಗೂ 6 ಎಲಿವೇಟೆಡ್ ನಿಲ್ದಾಣಗಳಾಗಿವೆ. ಅಂಡರ್​ಗ್ರೌಂಡ್ ಭಾಗ ಇನ್ನೂ ನಿರ್ಮಾಣ ಹಂತದಲ್ಲಿದೆ. ಎಲಿವೇಟೆಡ್ ಮಾರ್ಗ ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ಸಾಗಲಿದೆ. ಬಿಇಎಂಎಲ್ ನಿರ್ಮಿತ ಆರು ಬೋಗಿಗಳ ರೈಲುಗಳು ಚಾಲಕರಹಿತ ಸಂಚಾರ ತಂತ್ರಜ್ಞಾನ ಹೊಂದಿದ್ದು, ಗರಿಷ್ಠ 90 ಕಿ.ಮೀ. ವೇಗ ಹಾಗೂ 2,008 ಪ್ರಯಾಣಿಕರ ಸಾಮರ್ಥ್ಯ ಹೊಂದಿವೆ. ಎಲಿವೇಟೆಡ್ ಮಾರ್ಗದ ಆರೂ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಗೇಟ್‌ಗಳನ್ನು ಅಳವಡಿಸಲು ಯೋಜಿಸಲಾಗಿದೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಹಳದಿ ಮಾರ್ಗದೊಂದಿಗೆ, ಎಂ.ಜಿ. ರಸ್ತೆಯಲ್ಲಿ ನೇರಳೆ ಮಾರ್ಗದೊಂದಿಗೆ ಸಂಪರ್ಕ ಸಿಗಲಿದೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button