*ಸೋನಿಯಾ ಆತ್ಮಕಥೆಗೆ ಸಿಖ್ ಸಮುದಾಯದ ಆಕ್ರೋಶ*: *ಪುಸ್ತಕ ಸುಟ್ಟು ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಡುಗಡೆಯ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಶುರುವಾಗಿದೆ. 1984ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದಂತೆ ರಾಜೀವ್ ಗಾಂಧಿ ಅವರ ಪಾತ್ರದ ಕುರಿತು ಪುಸ್ತಕದಲ್ಲಿರುವ ಉಲ್ಲೇಖಗಳು ದೆಹಲಿಯ ಸಿಖ್ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿವೆ. ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಕುರಿತ ಸೋನಿಯಾ ಅವರ ಅಭಿಪ್ರಾಯಗಳೂ ಗಮನ ಸೆಳೆಯುತ್ತಿವೆ.
ರಾಜೀವ್ ಗಾಂಧಿ ಪರ ಸೋನಿಯಾ ಹೇಳಿಕೆ: ಸಿಖ್ ಸಮುದಾಯದ ಆಕ್ರೋಶ
1984ರ ಸಿಖ್ ವಿರೋಧಿ ದಂಗೆಯ ಕುರಿತು ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿರುವ ಸೋನಿಯಾ ಗಾಂಧಿ, ಪತಿ ರಾಜೀವ್ ಗಾಂಧಿ ಅವರ ಹೃದಯದಲ್ಲಿ ಧರ್ಮಾಂಧತೆ ಅಥವಾ ದ್ವೇಷ ಇರಲಿಲ್ಲ ಎಂದು ಉಲ್ಲೇಖಿಸಿದ್ದಾರೆ. ಇಂದಿರಾ ಗಾಂಧಿ ಹತ್ಯೆಯ ಬಳಿಕ ಆಡಳಿತ ವೈಫಲ್ಯದ ಇತಿಹಾಸದ ಒಂದು ಕ್ಷಣಕ್ಕೆ ರಾಜೀವ್ ಅವರನ್ನು ತಳ್ಳಲಾಯಿತು. ಇದರಿಂದ ಅನಾಗರಿಕತೆಗೆ ದಾರಿ ಮಾಡಿಕೊಟ್ಟಿತು ಎಂಬ ಅರ್ಥದಲ್ಲಿ ಅವರು ಬರೆದಿದ್ದಾರೆ.
ಈ ಹೇಳಿಕೆಗೆ ದೆಹಲಿಯ ಸಿಖ್ ಸಮುದಾಯದ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುರುವಾರ ರಕಬ್ ಗಂಜ್ ಗುರುದ್ವಾರದಲ್ಲಿ ಸಿಖ್ ವಿರೋಧಿ ಗಲಭೆಯ ಸಂತ್ರಸ್ತ ಕುಟುಂಬಗಳು ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ (DSGMC) ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಆತ್ಮಕಥೆ ಆಧರಿಸಿ ತೆಲುಗು ಸಿನಿಮಾ!
ಇನ್ನೊಂದೆಡೆ, ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಆಧರಿಸಿ ಸಿನಿಮಾ ನಿರ್ಮಿಸುವುದಾಗಿ ತೆಲಂಗಾಣ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಟಿ. ಜಯಪ್ರಕಾಶ್ ರೆಡ್ಡಿ ಅಲಿಯಾಸ್ ಜಗ್ಗಾ ರೆಡ್ಡಿ ಘೋಷಿಸಿದ್ದಾರೆ.
ಪುಸ್ತಕವನ್ನು ಆಧರಿಸಿ ತೆಲುಗು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಿನಿಮಾ ನಿರ್ಮಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದ್ದಾರೆ. ಚಿತ್ರದ ಆರಂಭಿಕ ಕೆಲಸಗಳ ಮೇಲ್ವಿಚಾರಣೆಗಾಗಿ 50 ಜನರ ತಂಡ ರಚಿಸಲಾಗಿದೆ. ಪಕ್ಷದ ಕಾರ್ಯಕರ್ತರಿಂದ ದೇಣಿಗೆ ಸಂಗ್ರಹಿಸಿ ಸಿನಿಮಾ ನಿರ್ಮಾಣ ಮಾಡುವ ಯೋಜನೆಯನ್ನೂ ಅವರು ಪ್ರಕಟಿಸಿದ್ದಾರೆ.
ದೆಹಲಿ ಮತ್ತು ರಾಜೀವ್ ಗಾಂಧಿ ಹತ್ಯೆಯಾದ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆ. ಡಿಸೆಂಬರ್ 9ರಂದು ಸೋನಿಯಾ ಗಾಂಧಿ ಅವರ ಜನ್ಮದಿನದ ಸಂದರ್ಭದಲ್ಲಿ ಚಿತ್ರದ ಕುರಿತು ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. 2028ರ ಡಿಸೆಂಬರ್ 9ರಂದು ಸಿನಿಮಾ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ. ಈ ನಡುವೆ ಸಂಗಾರೆಡ್ಡಿ ಕ್ಷೇತ್ರದ ಕಾಂಗ್ರೆಸ್ ಸಂಚಾಲಕ ಜೂಲಕಂಟಿ ಆಂಜನೇಯಲು ಚಿತ್ರ ನಿರ್ಮಾಣಕ್ಕಾಗಿ 2 ಕೋಟಿ ರೂಪಾಯಿ ದೇಣಿಗೆ ಘೋಷಿಸಿದ್ದಾರೆ.
ಮೋದಿ ಬಗ್ಗೆ ಸೋನಿಯಾ ಮೆಚ್ಚುಗೆಯ ಮಾತು!
ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾ ಬಂದಿರುವ ಸೋನಿಯಾ ಗಾಂಧಿ, ತಮ್ಮ ಆತ್ಮಚರಿತ್ರೆಯಲ್ಲಿ ಅವರ ಬಗ್ಗೆ ಕೆಲವು ಮೆಚ್ಚುಗೆಯ ಮಾತುಗಳನ್ನೂ ಬರೆದಿದ್ದಾರೆ.
ಮಂಗಳವಾರ ಬಿಡುಗಡೆಯಾದ ‘Belonging: A Journey of Love’ ಪುಸ್ತಕದಲ್ಲಿ ಸಂಸತ್ತಿನ ಆವರಣದಲ್ಲಿ ಮೋದಿ ಅವರೊಂದಿಗೆ ನಡೆದ ಮುಖಾಮುಖಿ, ಲಘು ಮಾತುಕತೆ ಮತ್ತು ಇಬ್ಬರ ನಡುವಿನ ಸಂಬಂಧದ ಕುರಿತು ವಿವರಿಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಲ್ಪನೆಯ ಭಾರತದಿಗಾಗಿ ಹೋರಾಡುತ್ತಿದ್ದಾರೆ. ನಾನು ನನ್ನ ಕಲ್ಪನೆಯ ಭಾರತದಿಗಾಗಿ ಹೋರಾಡುತ್ತಿದ್ದೇನೆ” ಎಂದು ಸೋನಿಯಾ ಉಲ್ಲೇಖಿಸಿದ್ದಾರೆ.
ಮೋದಿ ಅವರ ಆರಂಭಿಕ ಜೀವನದ ಕಷ್ಟಗಳ ಕುರಿತು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಅವಕಾಶಗಳ ಕೊರತೆಯಿದ್ದ ಪರಿಸ್ಥಿತಿಯಲ್ಲಿ ಆರ್ಎಸ್ಎಸ್ನೊಳಗೆ ಸಾಕಷ್ಟು ಶ್ರಮವಹಿಸಿ ಅಧಿಕಾರದ ಹಂತಕ್ಕೆ ಏರಿದ್ದಾರೆ ಎಂದು ಬರೆದಿದ್ದಾರೆ.
ಒಟ್ಟಿನಲ್ಲಿ, ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯಲ್ಲಿನ ರಾಜೀವ್ ಗಾಂಧಿ ಕುರಿತ ಹೇಳಿಕೆ, ಸಿಖ್ ಸಮುದಾಯದ ಪ್ರತಿಭಟನೆ, ಸಿನಿಮಾ ನಿರ್ಮಾಣದ ಘೋಷಣೆ ಮತ್ತು ಮೋದಿ ಕುರಿತ ಅಭಿಪ್ರಾಯಗಳು ಇದೀಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


