
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಧುನಿಕ ಜಗತ್ತು ಈ ಹಿಂದೆಂದೂ ಕೋವಿಡ್ ನಂತಹ ಸಂಕಷ್ಟವನ್ನು ಎದುರಿಸಿರಲಿಲ್ಲ. ನಮ್ಮಲ್ಲಿ ಹಲವರು ತಮ್ಮ ಕುಟುಂಬದವರನ್ನೇ ಕಳೆದುಕೊಂಡಿದ್ದಾರೆ. ಭಾರತ ಶಕ್ತಿ ಮೀರಿ ಕೊರೊನಾ ವಿರುದ್ಧ ಹೋರಾಟ ನಡೆಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ಸೋಂಕು ದಿನದಿಂದ ದಿನಕ್ಕೆ ತನ್ನ ರೂಪವನ್ನು ಬದಲಿಸಿ ಅಟ್ಟಹಾಸ ಮೆರೆದಿದೆ. ಕೊರೊನಾ ರೂಪಾಂತರಿ ಅದೃಶ್ಯ ವೈರಿಯಾಗಿದೆ. ಇದು ಶತಮಾನದ ಅತಿ ದೊಡ್ಡ ಸಾಂಕ್ರಾಮಿಕ ರೋಗ. ಇಂತಹ ರೋಗ ತಡೆಗಟ್ತುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಪ್ರಯತ್ನ ನಡೆಸಿದ್ದೇವೆ. ದೇಶಾದ್ಯಂತ ಕೋವಿಡ್ ಟೆಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಆಸ್ಪತ್ರೆಗಳಲ್ಲಿ ಬೆಡ್, ಐಸಿಯು ಹೆಚ್ಚಳ ಮಾಡಲಾಗಿದೆ. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ 10 ಪಟ್ಟು ಹೆಚ್ಚು ಉತ್ಪಾದಿಸಲಾಗುತ್ತಿದೆ. ಹೊಸ ರೀತಿಯ ಆರೋಗ್ಯ ಮೂಲಸೌಕರ್ಯವನ್ನು ಒದಗಿಸಲಾಗಿದ್ದು, ಬೇಡಿಕೆ ಈಡೇರಿಸುವಲ್ಲಿ ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಕೋವಿಡ್ ಲಸಿಕೆ ನಮ್ಮ ಸುರಕ್ಷಾ ಕವಚ. ವ್ಯಾಕ್ಸಿನ್ ಉತ್ಪಾದನೆ ಜೊತೆಗೆ ದೇಶಾದ್ಯಂತ ವ್ಯಾಕ್ಸಿನೇಷನ್ ನೀಡಿಕೆಯೂ ವೇಗವಾಗಿ ನಡೆಯುತ್ತಿದೆ. ಸರ್ಕಾರ ಎಲ್ಲರಿಗೂ ವ್ಯಾಕ್ಸಿನ್ ನೀಡಲು ಬದ್ಧವಾಗಿದೆ. ಈಗಾಗಲೇ 23 ಕೋಟಿ ಜನರಿಗೆ ಲಸಿಕೆ ನೀಡಲಾಗಿದ್ದು, ವ್ಯಾಕ್ಸಿನ್ ಉತ್ಪಾದನೆಯಲ್ಲಿ ಮಿಷನ್ ಇಂದ್ರಧನುಷ್ ಪ್ರಮುಖ ಪಾತ್ರವಹಿಸಿದೆ. ಕೊರೊನಾ ಅಪಾಯ ಹೆಚ್ಚಾಗಿರುವವರಿಗೆ ಮೊದಲು ಲಸಿಕೆ ಆದ್ಯತೆ ನೀಡಲಾಗುತ್ತಿದೆ. ಜಗತ್ತಿನ ಹಲವು ದೇಶಗಳಲ್ಲಿ ಲಸಿಕೆ ನೀದಿಕೆ ನಿಧಾನಗತಿಯಲ್ಲಿ ಸಾಗಿದೆ. ಆದರೆ ಭಾರತದಲ್ಲಿ ವೇಗ ಪಡೆದಿದೆ ಎಂದರು.
ಜೂನ್ 21ರಿಂದ ದೇಶದ ಜನರಿಗೆ ಉಚಿತ ಲಸಿಕೆ ನೀದಲಾಗುವುದು. ಕೇಂದ್ರ ಸರ್ಕಾರವೇ ರಾಜ್ಯಗಳಿಗೆ ಉಚಿತ ಲಸಿಕೆ ಪೂರೈಸಲಿದೆ. ಶೇ.25ರಷ್ಟು ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ಖರೀದಿ ಮಾಡಬಹುದು. ಶೇ.75ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರ ಖರೀದಿಸಲಿದೆ. ಖಾಸಗಿ ಆಸ್ಪತ್ರೆಗಳು ಸೇವಾ ಶುಲ್ಕವನ್ನು 150 ರೂಪಾಯಿ ಮಾತ್ರ ಪಡೆಯಬೇಕು. ಬಡವರು ಯಾರೂ ಹಸಿವಿನಿಂದ ಬಳಲಬಾರದು. ಈ ನಿಟ್ಟಿನಲ್ಲಿ 80 ಕೋಟಿ ಜನರಿಗೆ ನವೆಂಬರ್ ವರೆಗೂ ಉಚಿತ ಆಹಾರಧಾನ್ಯ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊರೊನಾಗೆ ಬಲಿ
ಸಿಎಂ ಪರ ಶಾಸಕರ ಸಹಿ ಸಂಗ್ರಹ ಎಂದ ರೇಣುಕಾಚಾರ್ಯ; ನಿಯಮ ಮೀರಿದರೆ ಕ್ರಮ ಎಂದ ಸಚಿವ ಅಶೋಕ್