ಪ್ರಗತಿವಾಹಿನಿ ಸುದ್ದಿ; ಕೋಲಾರ: ಈ ಬಾರಿಯ ಚುನಾವಣೆ ಕೇವಲ ಶಾಸಕರು, ಸಚಿವರು, ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವ ಚುನಾವಣೆ ಅಲ್ಲ, ಮುಂದಿನ 25 ವರ್ಷಗಳ ಕಾಲ ಕರ್ನಾಟಕವನ್ನು ಅಭಿವೃದ್ಧಿ ರಾಜ್ಯ ಮಾಡುವುದಾಗಿದೆ. ಕಾಂಗ್ರೆಸ್- ಜೆಡಿಎಸ್ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬೇಕಿದೆ. ಆ ನಿಟ್ಟಿನಲ್ಲಿ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತದಾರರಿಗೆ ಕರೆ ನೀಡಿದ್ದಾರೆ.
ಕೋಲಾರದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್ ಇಡೀ ದೇಶದ ಜನತೆಗೆ ಮೋಸ ಮಾಡಿದೆ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ವೇಗವಾಗಿ ಸಾಗಲು ಸಾಧ್ಯ. ಕೇಂದ್ರದಲ್ಲಿರುವ ಪ್ರಬಲವಾದ ಬಿಜೆಪಿ ಇಂಜಿನ್ ತರಹ ಕರ್ನಾಟಕದಲ್ಲಿಯೂ ಗಟ್ಟಿ ಇಂಜಿನ್ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ನಂತಹ ಗುಜರಿ ಇಂಜಿನ್ ನಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಟೀಕಿಸಿದರು.
ಕಾಂಗೆಸ್ ನ ಸುಳ್ಳು ಗ್ಯಾರಂಟಿ ಯೋಜನೆಗಳು ಯಾವುದೂ ಜಾರಿಗೆ ಬರಲ್ಲ. 2005 ರಿಂದ 2014ರವರೆಗೆ 10 ವರ್ಷಗಳ ಕಾಲ ಸುಳ್ಳು ಆಶ್ವಾಸನೆಗಳನ್ನು ಕಾಂಗ್ರೆಸ್ ನೀಡಿತು. ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಪೂರೈಸುವುದಾಗಿ ಹೇಳಿತ್ತು. ಆದರೆ ಅನೇಕ ಹಳ್ಳಿಗಳು ಕತ್ತಲಲ್ಲಿ ಮುಳುಗಿದ್ದರೂ ಏನೂ ಮಾಡಿಲ್ಲ. ದೇಶದ ಜನರಿಗೆ ಮೋಸ ಮಾಡಿದ್ದು ಕಾಂಗ್ರೆಸ್. ಬಳಿಕ ನಾವು ಅಧಿಕಾರಕ್ಕೆ ಬಂದ 18 ದಿನಗಳಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡಿದೆವು ಎಂದು ಹೇಳಿದರು.
ಕಾಂಗ್ರೆಸ್ ಗೆ ರೈತರ ಬಗ್ಗೆ ಎಂದೂ ಕಾಳಜಿಯಿರಲಿಲ್ಲ. ರೈತರಿಗೆ ದೊರೆಯಬೇಕಿದ್ದ ಶೇ.80ರಷ್ಟು ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ 85% ಕಮಿಷನ್ ನಡೆಯುತ್ತಿತ್ತು. ಇದನ್ನು ಬಿಜೆಪಿ ಆರೊಪ ಮಾಡುತ್ತಿಲ್ಲ, ಸ್ವತ: ಕಾಂಗ್ರೆಸ್ ನಾಯಕರು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ