ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೨೦ನೇ ಶತಮಾನದಲ್ಲಿ ಕನ್ನಡ ನಾಡು ಕಂಡ ದಾರ್ಶನಿಕ ಕವಿ ಬೇಂದ್ರೆ.ಯುಗಪ್ರಜ್ಞೆಯೇ ಅವರ ಸಮಗ್ರ ಕಾವ್ಯಗಳಲ್ಲಿ ಜೀವದ್ರವ್ಯವಾಗಿ ಹರಿಸಿದೆ ಬೇಂದ್ರೆ ಕವಿರೂಪದ ದಾರ್ಶನಿಕ. ಅವರ ಸಮಗ್ರ ಸಾಹಿತ್ಯ ಈ ನೆಲದ ಪ್ರಾತಿನಿಧಿಕ ಅಭಿವ್ಯಕ್ತಿ ಎಂದು ಕಲೇಸಂ ಬೆಳಗಾವಿ ಘಟಕ ಅಧ್ಯಕ್ಷರಾದ ಡಾ.ಕೆ ಆರ್ ಸಿದ್ಧಗಂಗಮ್ಮ ಅವರು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ , ಬೆಂಗಳೂರು ಚಕೋರ ಸಾಹಿತ್ಯ ವಿಚಾರ ವೇದಿಕೆ ,ಬೆಳಗಾವಿ ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಇವರ ಸಹಯೋಗದಲ್ಲಿ ದಿನಾಂಕ ೩೧- ೧-೨೦೨೫ ರಂದು ಶಿವಬಸವನಗರ ಬೆಳಗಾವಿಯಲ್ಲಿ ಕವಿದಿನ ಸಂಭ್ರಮಾಚರಣೆಯು ಅರ್ಥಪೂರ್ಣವಾಗಿ ಜರುಗಿತು.
ವರಕವಿ ಬೇಂದ್ರೆಯವರ ೧೨೯ನೇ ಜನ್ಮದಿನದ ಪ್ರಯುಕ್ತ ವಿಶೇಷ ಉಪನ್ಯಾಸ, ಬೇಂದ್ರೆ ಭಾವಗೀತೆ ಗಾಯನ, ಸ್ವರಚಿತ ಕಾವ್ಯವಾಚನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ವಿಶಿಷ್ಟವಾದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾದ ಪ್ರಾಧ್ಯಾಪಕಿ ಡಾ ಕೆ.ಆರ್ ಸಿದ್ಧಗಂಗಮ್ಮ ಅವರು ಬೇಂದ್ರೆ ಕಾವ್ಯದ ಒಟ್ಟು ಆಶಯಗಳನ್ನು ಕುರಿತಾಗಿ ಮಾತನಾಡಿದರು.
ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಅವರ ಸ್ನಾತಕೋತ್ತರ ಅಧ್ಯಯನದ ದಿನಗಳಲ್ಲಿ ನಾಡಿನ ಪ್ರಸಿದ್ಧ ವಿಮರ್ಶಕರಾದ ಪ್ರೊ ಕಿ.ರಂ ನಾಗರಾಜ ಅವರು ಬೇಂದ್ರೆಯವರ ಕಟ್ಟಾ ಅಭಿಮಾನಿಗಳಾಗಿದ್ದು ಬೇಂದ್ರೆ ಅಜ್ಜನನ್ನು ತಮ್ಮ ಹೃದಯದಲ್ಲಿಟ್ಟು ಆರಾಧಿಸುತ್ತಿದ್ದರು. ಬೇಂದ್ರೆಯವರ ಸಾಹಿತ್ಯ ಕುರಿತಾಗಿ ಅನೇಕ ಸಂದರ್ಭದಲ್ಲಿ ಕಿ.ರಂ ಅವರು ಮನೋಜ್ಞವಾಗಿ ಉಪನ್ಯಾಸ ನೀಡುತ್ತಿದ್ದರು ಎಂದು ನೆನಪಿಸಿಕೊಂಡರು.
ಕವಿದಿನ ಕಾರ್ಯಕ್ರಮ ಆಯೋಜಕರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕರಾದ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ .ಈ ನೆಲದ ಜನಪದ ಭಾವಭಾಷೆಯ ವಾರಸುದಾರ ಕವಿಯಾಗಿ ಬೇಂದ್ರೆಯವರು ಅತ್ಯಂತ ಮೌಲ್ಯಯುತ ಸಾಹಿತ್ಯ ರಚಿಸುವ ಮೂಲಕ ಧಾರವಾಡ ನೆಲವನ್ನು ಪಾವನಗೊಳಿಸಿದ್ದಾರೆ.ಪಟ್ಟಪಾಡನ್ನು ಹುಟ್ಟು ಹಾಡಾಗಿಸಿಕೊಂಡು ಬದುಕಿದ ಬೇಂದ್ರೆಯವರ ಜೀವನವೇ ಮಹಾಕಾವ್ಯವಾಗಿತ್ತು.ಜೀವನದಲ್ಲಿ ಬೆಂದವರು ಮಾತ್ರ ಬೇಂದ್ರೆ ಆಕ್ತಾರ ಅಂತ ಹೇಳುವ ಮೂಲಕ ತಮ್ಮ ಜೀವನಗಾಥೆಯನ್ನೇ ಸಾಹಿತ್ಯವಾಗಿ ರೂಪಿಸಿದ ಶಬ್ದ ಗಾರುಡಿಗ.ಸಾವಿನ ಮನೆಯಲ್ಲೂ ಸಮಚಿತ್ತದಿಂದ ಕಾವ್ಯ ರಚಿಸ ಬಲ್ಲ ಶಕ್ತಿ ಬೇಂದ್ರೆಯವರಿಗಲ್ಲದೇ ಬೇರೆಯಾರಿಗೆ ಬರಲು ಸಾಧ್ಯವಿಲ್ಲ.
ಬೇಂದ್ರೆ ಸಾಹಿತ್ಯದಲ್ಲಿ ಆಧ್ಯಾತ್ಮಿಕ ಅನುಭಾವ ಹಾಸು ಹೊಕ್ಕಾಗಿದೆ.ಪರಿಪೂರ್ಣತೆಯೆಡೆಗೆ ಸಾಗುವ ನಿರಂತರವಾದ ಪ್ರಕ್ರಿಯೆಗೆ ಒಳಗು ಪಡಿಸುವ ಬೇಂದ್ರೆ ಕಾವ್ಯವೆಂದರೆ ಅದು ಚೈತನ್ಯದ ಪೂಜೆ ಇದ್ದಂತೆ.
ಕವಿತ್ವ ಮತ್ತು ಕವಿತತ್ವಗಳ ಕುರಿತಾಗಿ ಬೇಂದ್ರೆಯವರಿಗೆ ಸ್ಪಷ್ಟವಾಗಿ ನೀಲುವಿತ್ತು ಈ ಕಾರಣಕ್ಕಾಗಿಯೇ ಬೇಂದ್ರೆಯವರ ಕಾವ್ಯಗಳಲ್ಲಿ ಪ್ರತಿಮಾ ಲೋಕ ಬೆರಗಿನಿಂದ ಕೂಡಿತ್ತು.ಒಳಗ ಹದ ಇದ್ರ ಮಾತ್ರ ಹೊರಗ ಪದ ಬರತದ ಅನ್ನುವ ಬೇಂದ್ರೆಯವರ ಕಾವ್ಯ ನೋಟವು ಕವಿಯ ಪ್ರತಿಭಾ ಶಕ್ತಿಯ ವಿರಾಟ ಸ್ವರೂಪದ ಕುರಿತಾದ ದಾಖಲಾರ್ಹ ಮಾತಾಗಿತ್ತು.ಬೇಂದ್ರೆ ಸಮಗ್ರ ಕಾವ್ಯವು ಸಮರಸದ ಬದುಕಿಗೆ ಹಿಡಿದ ಕನ್ನಡಿಯಾಗಿದೆ.ನಮ್ಮ ಕಣ್ಣೋಟದಲ್ಲಿ ಕಾಣಬಹುದಾದ ದಾರ್ಶನಿಕ ವ್ಯಕ್ತಿತ್ವ ಅವರದಾಗಿತ್ತು.
ಸರಸ ಜೀವನ, ವಿರಸ ಮರಣ, ಸಮರಸವೇ ಜೀವನ ಎನ್ನುವ ಬೇಂದ್ರೆಯವರ ಕಾವ್ಯ, ಬುದ್ದಿ ಭಾವಗಳ ವಿದ್ಯುದಾಲಿಂಗಕ್ಕೆ ಒಳಗಾಗಿದ್ದಾಗಿತ್ತು.ಕಲ್ಪನಾ ವಿಲಾಸದಲ್ಲಿ ಕಾವ್ಯ ಕಟ್ಟಿದರು ಅವರ ಕಲ್ಪಕತೆಯಲ್ಲಿ ಕಾವ್ಯದ ಮಹೋನ್ನತಿ ಎದ್ದು ಕಾಣುತ್ತಿತ್ತು.ಧಾರವಾಡದ ಸಾಧನಕೇರಿ ಮತ್ತು ಕೆಲಗೇರಿ ಕೆರೆಗಳು ಬೇಂದ್ರೆ ಸಾಹಿತ್ಯದಲ್ಲಿ ಅಜರಾಮರವಾಗಿವೆ.ಧಾರವಾಡ ನೆಲದ ಪ್ರಾದೇಶಿಕ ಭಾಷಾ ವೈವಿಧ್ಯತೆ ಬೇಂದ್ರೆ ಕಾವ್ಯದ ಜೀವಾಳವಾಗಿದ್ದವು.ಅಪ್ಪಟ ದೇಸಿ ಪ್ರತಿಭೆ ಜಾನಪದ ಸೊಗಡು ಜೀವನ ವೈವಿಧ್ಯತೆ ಅವರ ಸಾಹಿತ್ಯದ ತಳಹದಿಯಾಗಿತ್ತು.
ಈ ಕಾರಣದಿಂದ ಬೇಂದ್ರೆ ಕಾವ್ಯದ ಅಭಿವ್ಯಕ್ತಿಯಲ್ಲಿ ಸಹವಾಗಿಯೇ ಕವಿ ಜೀವನದ ತಪ್ಪಸ್ಸು ಹದಗೊಂಡಿತ್ತು ಪಕ್ವಗೊಂಡಿತ್ತು.ಕಾವ್ಯವೇ ಅವರಿಗೆ ತಪಸ್ಸು.ಜೀವಿತದ ಕೊನೆಯವರೆಗೂ ಕಾವ್ಯವನ್ನೆ ಬದುಕಿದ ವರಕವಿ.ಕನ್ನಡ ಸೃಜನಶೀಲ ಕವಿ ಬೇಂದ್ರೆ ಯುಗಾದಿಯ ಜೀವಮುಗುಳು ಹಾಗೂ ಶ್ರಾವಣದ ಸಮೀರ. ದೇಶದ ಸಂತರು ಮಹಾಂತರು ದಾರ್ಶನಿಕರು ಅವಧೂತರಿಂದ ಗೌರವಿಸಲ್ಪಟ್ಟ ಅವಧೂತ ಪ್ರಜ್ಞೆಯ ಕವಿ.
ದಾರ್ಶನಿಕ ಮಹಾಕವಿ ಅರವಿಂದರಿಂದ ಪ್ರಭಾವಿತರಾದ ಬೇಂದ್ರೆಯವರ ಬದುಕು ನಸುನಗುತ ಬಂದೇವ ತುಸು ನಗುತ ಸಾಗೋಣ ಯಾಕಾರ ಕೆರಳೋಣ ಎನ್ನುವ ಸಮಭಾವದ ತಾಯ್ತನದ ಹೃದಯ ಹೊಂದಿದ ಕವಿಯಾಗಿದ್ದರು.ಬೇಂದ್ರೆ ತಮ್ಮ ಕಾವ್ಯದಲ್ಲಿ *ಪಾಕ ಹೊಂದಿದ ಪ್ರಕೃತಿ ಪ್ರೇಮದಿ ಪರಿಣಮಿಸಿ, ಜೀವನ ದೇವನ ಮಾಡುವದು ಕಲಿಕೆಯ ಮಾತಲ್ಲ, ವಾದದ ಫಲವಲ್ಲ , ಅದೃಷ್ಟವಶವಲ್ಲವದು, ಅದು ಎದೆಯೊಲವು* ಎನ್ನುವ ಸಾಲುಗಳು ಹಾಗೂ ಇದು ಬರಿ ಬೆಳಗಲ್ಲೊ ಅಣ್ಣಾ ಎನ್ನುವ ಬೇಂದ್ರೆಯವರ ಕಾವ್ಯವು ಲೋಕದ ಆತ್ಯಂತಿಕ ದೈವಾನುಭೂತಿಯ ಕುರಿತಾಗಿ ಅರುಹಿದೆ.
ಅಕ್ಷರ ಮಾಂತ್ರಿಕ ಬೇಂದ್ರೆ ಸದಾ ನೋವು ನುಂಗಿ ನಕ್ಕವರು ಹೀಗಾಗಿ *ನಗ್ರೊ ನಗ್ರಿ ನಕ್ಕೊಂತ ಸತ್ತರ ನಕ್ಷತ್ರ ಆಕ್ತಿರಿ* ಅಂತ ಹೇಳುವ ಮೂಲಕ ಬದುಕಿನ ಕಹಿಯನ್ನು ಸಕಾರಾತ್ಮಕತೆಯೆಡೆಗೆ ಪರಿವರ್ತನೆ ಮಾಡಿದ ಮೂಲಕ ಈ ದೇಶ ಕಂಡ ದಾರ್ಶನಿಕ ಕವಿಯಾಗಿದ್ದಾರೆ.ಬೇಂದ್ರೆ ಕಾವ್ಯ ಕಂಡವರಿಗೆ ಕಂಡಂತೆ. ದಕ್ಕಿಸಿಕೊಂಡಷ್ಟು ತಬ್ಬಿಕೊಳ್ಳುವ ಬೇಂದ್ರೆ ಕಾವ್ಯ ಬಳ್ಳಿ ಸದಾ ಹಸಿರಾಗಿದೆ.ಜೀವನ್ಮುಖಿಯಾದ ಬೇಂದ್ರೆ ನಮ್ಮಲ್ಲಿ ಬೆರೆತಿದ್ದಾರೆ ಎಂದು ಡಾ.ಮೈತ್ರೇಯಿಣಿ ನುಡಿಯುತ್ತ.ಸಾವು ಹೊತ್ತ ಕೌದಿ ಎಂಬ ತಮ್ಮ ಕವನವಾಚಿಸಿದರು.
ಬೇಂದ್ರೆ ಕಾವ್ಯದಲ್ಲಿ ದೇಸೀಯತೆ ಎಂಬ ವಿಷಯ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬೆಳಗಾವಿ ಕನ್ನಡ ವಿಭಾಗದ ಪ್ರಾಧ್ಯಾಪಕಿ, ಡಾ. ಬಸಮ್ಮ .ಎಸ್.ಗಂಗನಳ್ಳಿ ಮಾತನಾಡುತ್ತ ,ಜಗದ ಕವಿ, ಯುಗದ ಕವಿ ಬೇಂದ್ರೆಯವರ ಜೀವನವೇ ಒಂದು ಮಹಾಕಾವ್ಯ. ಜೀವನದಲ್ಲಿ ಹಲವಾರು ಕಷ್ಟ,ಸಂಕೋಲೆಗಳಲ್ಲಿ ಸಿಲುಕಿ ಬದುಕಿನಲಿ ಬಳಲಿ ಬೆಂಡಾದರೂ ಜೀವನ ಪ್ರೀತಿಯನ್ನು ಇಟ್ಟುಕೊಂಡು, ಸಮಸ್ಯೆ, ಸವಾಲುಗಳನ್ನು ಎದುರಿಸಿ, ನೋವುಗಳನ್ನು ಸಮಚಿತ್ತದಿಂದ ಸ್ವೀಕರಿಸಿದವರು. ಅವರ ಒಂದೊಂದು ಪದಗಳು ಭಿನ್ನವಾಗಿ ಅರ್ಥ ನೀಡುತ್ತವೆ.
ಅನೇಕ ಸಂದರ್ಭಗಳಲ್ಲಿ ಆ ಪದ ಬಳಕೆಯು ವಿಶಿಷ್ಟ ಅನುಭವವನ್ನು ಕಟ್ಟಿಕೊಡುತ್ತವೆ. ಅಪ್ಪಟ ದೇಶೀಯ ಹಿನ್ನೆಲೆಯಲ್ಲಿ, ಆಡುಮಾತಿನ ಗೇಯತೆಯಿಂದ ಕೂಡಿದ ಅವರ ಕವಿತೆಗಳಲ್ಲಿ ಶ್ರುತಿ ಮಾಧುರ್ಯವಿದೆ. ಸರಳ ಮಾತುಗಳು,ಸುಂದರ ಭಾವಗೀತೆಯಾಗಿಹೊರಹೊಮ್ಮಿವೆ. ದಾಂಪತ್ಯವೆಂದರೆ ಸತಿ- ಪತಿ ಮಾತ್ರವಲ್ಲ, ಸಖ- ಸಖಿಯರಾಗಿರುತ್ತಾರೆ.ಎನ್ನುವುದು ಬೇಂದ್ರೆಯವರ ಸಖಿಗೀತದ ಮೂಲಕ ಕಾಣಬಹುದು.
ಅವರಿಗೆ ಸಂಸಾರ ಜಂಜಾಟವೆನಿಸಲಿಲ್ಲ ಆ ಬಾಂಧವ್ಯವನ್ನು ದಾಂಪತ್ಯ ಯೋಗವೆಂಬಂತೆ ಕಂಡವರು. ಹೆಣ್ಣಿನ ಅತೀ ಸೂಕ್ಷ್ಮ ಭಾವನೆಗಳು ಅವರು ಕವಿತೆಗಳಲ್ಲಿ ಅರ್ಥಪೂರ್ಣ ಮತ್ತು ವಾಸ್ತವವಾಗಿ ಮೂಡಿಬಂದಿವೆ.ಪ್ರಕೃತಿಯ ಆರಾಧಕರಾದ ಬೇಂದ್ರೆಯವರ ಕಾವ್ಯದಲ್ಲಿ “ರವದಿ”ಗೂ “ಹುಣಸೆ ಬೀಜಕ್ಕೂ” ಸ್ಥಾನವಿದೆ. ಸಾಮಾನ್ಯರಲ್ಲಿ ಬೆರೆತು, ಚಿಕ್ಕಂದಿನಿಂದಲೂ ಜನಪದ ಆಟ, ನಾಟಕ ಪ್ರದರ್ಶನ, ಲಾವಣಿ ಪದಗಳು ಇತರ ಹಾಡುಗಳನ್ನು ಕೇಳುತ್ತಾ , ನೋಡುತ್ತಾ ಬಂದು ಬೇಂದ್ರೆಯವರಿಗೆ ದೇಶೀಯ ಶೈಲಿ ಸಹಜವಾಗಿ ಒಲಿದು ಬಂತು, ಬೇಂದ್ರೆಯವರು ಆಧ್ಯಾತ್ಮಿಕತೆ, ತತ್ವಜ್ಞಾನ, ಸಂಖ್ಯಾಶಾಸ್ತ್ರ, ಇತರ ಎಲ್ಲಾ ಜ್ಞಾನ ಶಾಖೆಗಳ ಆಳವಾದ ಅಧ್ಯಯನ ಮಾಡಿದವರು.
ಅವರಿಗೆ ಅವರ ಜೀವನವೇ ಒಂದು ಅದ್ಭುತ ಅನುಭವ ಕಟ್ಟಿಕೊಟ್ಟಿದೆ.ಇರುವಷ್ಟು ದಿವಸ ನಗುತ ನಗಿಸುತ ಪ್ರೀತಿ- ಸ್ನೇಹದಿಂದ ಬಾಳಬೇಕು. ಎನ್ನುವುದು ಅವರ ಸಂದೇಶವಾಗಿದೆ. ಎಂದು ಪ್ರಾಧ್ಯಾಪಕಿ ಡಾ ಬಸಮ್ಮ ಗಂಗನಳ್ಳಿಯವರು ಬೇಂದ್ರೆಯವರ ಕಾವ್ಯಗಳಲ್ಲಿ ದೇಸಿಯತೆ ವಿಷಯ ಕುರಿತಾಗಿ ಅರ್ಥಪೂರ್ಣವಾಗಿ ಮಾತಾಡಿದರು.
ಚಕೋರ ವೇದಿಕೆ ಸಂಚಾಲಕರಾದ ಬೆಳಗಾವಿಯ ಹಿರಿಯ ಪತ್ರಕರ್ತರು ಸಾಹಿತಿಗಳಾದ ಎಲ್ ಎಸ್ ಶಾಸ್ತ್ರೀಯವರು ತಮ್ಮ ಅತಿಥಿಪರ ನುಡಿಗಳನ್ನಾಡುತ್ತ ತಮ್ಮ ಅದ್ಭುತ ಕಲ್ಪನಾ ಶಕ್ತಿ ಮತ್ತು ಅಪರೂಪದ ರೂಪಕಗಳ ಮೂಲಕ ಡಾ. ದ. ರಾ. ಬೇಂದ್ರೆಯವರು ತಮ್ಮ ಕವನಗಳನ್ನು ಶಬ್ದಚಿತ್ರಗಳಾಗಿ ನಮ್ಮ ಕಣ್ಣೆದುರು ತರುತ್ತಿದ್ದರು. ಮಹಾಕಾವ್ಯವನ್ನು ಬರೆಯದೆಯೂ ಮಹಾಕವಿಯೆನಿಸಿಕೊಂಡ ಬೇಂದ್ರೆಯವರು ಯಾವಾಗಲೂ ಜನಸಾಮಾನ್ಯರೊಡನೆ ಬೆರೆತುಕೊಳ್ಳುವ ಮೂಲಕ ತಮ್ಮ ಕಾವ್ಯದಲ್ಲಿ ದೇಶೀಯ ಗುಣಗಳನ್ನು ಪ್ರತಿಬಿಂಬಿಸುತ್ತಿದ್ದರು.
ಕುಮಾರವ್ಯಾಸನ ನಂತರದಲ್ಲಿ ನಮ್ಮ ನೆಲ ಪಡೆದ ಮತ್ತೊಬ್ಬ ಶ್ರೇಷ್ಠ ದಾರ್ಶನಿಕ ಅನುಭಾವ ಕವಿ ಎಂದು ಹಿರಿಯ ಸಾಹಿತಿ ಎಲ್. ಎಸ್. ಶಾಸ್ತ್ರಿಯವರಿಲ್ಲಿ ಹೇಳಿದರು.ಚಕೋರ ವೇದಿಕೆ ಜಿಲ್ಲಾ ಸಂಚಾಲಕ ಎಲ್. ಎಸ್. ಶಾಸ್ತ್ರಿ ಅವರು ಬೇಂದ್ರೆಯವರ ಜತೆಗಿನ ತಮ್ಮ ಒಡನಾಟದ ಅನುಭವಗಳನ್ನು ಹೇಳಿ ಬೇಂದ್ರೆಯವರ ಮಾಯಾಕಿನ್ನರಿ ಕವನ ಗೇಯಗೀತೆಯ ಮೂಲಕ ಹಾಡಿ ತೋರಿಸಿದರು.
ಚಕೋರ ವೇದಿಕೆ ಬೆಳಗಾವಿಯ ಇನ್ನೊರ್ವ ಸಂಚಾಲಕರು ಹಾಗೂ ಅತಿಥಿಗಳಾದ ನಾಗೇಶ ನಾಯಕ ಅವರು ಬೇಂದ್ರೆಯವರ ಕವಿತೆಗಳು ನನ್ನ ಒಳಗಿಳಿದಿದ್ದು ಅವರ ಭಾವಗೀತೆಗಳಿಂದ.ಅವರ ಸಾಕಷ್ಟುಭಾವಗೀತೆಗಳ ಕುರಿತಾಗಿ ಒಳನೋಟ ಕಟ್ಟಿಕೊಟ್ಟದಿದ್ದೆ. ಅವರು ಕವಿತೆಗಳಲ್ಲಿನ ರೂಪಕ, ಪ್ರತಿಮೆ, ದೇಸಿ ಸೊಗಡು, ಆಡು ಭಾಷೆ, ಹೃದ್ಯ ಭಾವ ಜನಸಾಮಾನ್ಯರನ್ನು ಸೆಳೆಯುವಂಥದ್ದು. ಬೇಂದ್ರೆ ಮೇರುಕವಿಯಾಗಿ ಇಂದಿಗೂ ಜನಮಾನಸದಲ್ಲಿ ಉಳಿದಿರುವುದು ಅವರ ಸರಳತೆ, ಮನ ಮುಟ್ಟುವ ಕವಿತೆಗಳಿಂದ ಎಂದರು. ನಾಗೇಶ ನಾಯಕ ಅವರು ಸೋಮಲಿಂಗ ಬೇಡರ ಅವರ ‘ಬೇಂದ್ರೆ ಅಜ್ಜ’ ಕವಿತೆಯನ್ನು ವಾಚಿಸಿ ಬೇಂದ್ರೆಯವರ ಕಾವ್ಯದ ಮೂಲಕ ಕಂಡರಿಸಿದ ವ್ಯಕ್ತಿತ್ವ ಕುರಿತಾಗಿ ಮಾತನಾಡಿದರು.
ವರಕವಿ ದ. ರಾ. ಬೇಂದ್ರೆಯವರ ಜನ್ಮದಿನದ ನಿಮಿತ್ತ ಜನೆವರಿ ೩೧ರಂದು ಬೆಳಗಾವಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಸಹಕಾರದೊಡನೆ ಏರ್ಪಡಿಸಿದ್ದ ” ಕವಿದಿನ ಸಂಭ್ರಮ ” ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಜರುಗಿತು. ಹದಿನೈದು ಕವಿಗಳು ಬೇಂದ್ರೆಯವರ ಕುರಿತು ಬರೆದ ಕವನ ವಾಚನ ಮಾಡಿದರು.
ಆಶಾ ಯಮಕನಮರಡಿ ಬೇಂದ್ರೆಯವರ ಭಾವಗೀತೆಯನ್ನು ಪ್ರಸ್ತುತ ಪಡಿಸಿದರು ಡಾ .ನಿರ್ಮಲಾ ಬಟ್ಟಲ್ ಸ್ವಾಗತಿಸಿದರು ಡಾ. ನೀತಾ ರಾವ್ ವಂದಿಸಿದರು. ರಾಜನಂದಾ ಘಾರ್ಗಿ ನಿರೂಪಿಸಿದರು.ಹಿರಿಯ ಸಾಹಿತಿಗಳಾದ ನೀಲಗಂಗಾ ಚರಂತಿಮಠ ಬೇಂದ್ರೆಯವರ ಜಾನಪದ ಶೈಲಿಯ ಹಾಡುಗಳನ್ನು ಹಾಡಿದರು.
ಪ್ರೇಮಾ ತಾಶೀಲದಾರ ಹಮೀದಾ ಬೇಗಂ ದೇಸಾಯಿ, ನಿರ್ಮಲಾ ಬಟ್ಟಲ, ಜ್ಯೋತಿ ಬದಾಮಿ, ಇಂದಿರಾ ಮೊಟೆಬೆನ್ನೂರು, ಪುಷ್ಪಾ ಮುರಗೋಡ, ಸುಧಾ ಪಾಟೀಲ, ರಮೇಶ ಮಡಿವಾಳರ, ಮಮತಾ ಶಂಕರ, ಜಯಶ್ರೀ ನಿರಾಕಾರಿ, ಲಲಿತಾ ಕೋಪರ್ಡೆ, ಹೇಮಾ ಭರಭರಿ, ಶಿವರಾಜ ಅರಳಿ, ಪದ್ಮಾ ಹೊಸಕೋಟೆ, ವರಕವಿ ಬೇಂದ್ರೆಯವರ ಕುರಿತು ಸ್ವರಚಿತ ಕವಿತೆ ವಾಚಿಸಿದರು. ಕಾರ್ಯಕ್ರಮದಲ್ಲಿ ಶ್ವೇತಾ ನರಗುಂದ. ನೀಲಕಂಠ ಮಲಕಣ್ಣವರ , ಪ್ರೊ. ಶಂಕರಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ