*ಖೋಟಾ ನೋಟು ಜಾಲ ಭೇದಿಸಿದ ಪೊಲೀಸರು*: *7 ಮಂದಿ ಬಂಧನ, ಲಕ್ಷಾಂತರ ನಕಲಿ ನೋಟು ವಶ*

ಪ್ರಗತಿವಾಹಿನಿ ಸುದ್ದಿ: ಲಕ್ಷಾಂತರ ರೂಪಾಯಿ ಮೌಲ್ಯದ ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಯತ್ನಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದ್ದು, ನಕಲಿ ನೋಟುಗಳು, ಪ್ರಿಂಟಿಂಗ್ ಯಂತ್ರಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಚಾಮರಾಜಪೇಟೆ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಮೈಸೂರು ರಸ್ತೆಯ ಫ್ಲೈಓವರ್ ಬಳಿಯ ಪೆಟ್ರೋಲ್ ಬಂಕ್ ಬಳಿ ಕಾರಿನಲ್ಲಿ ಖೋಟಾ ನೋಟುಗಳನ್ನು ಇಟ್ಟುಕೊಂಡು ಚಲಾವಣೆಗೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಕಾರನ್ನು ಪರಿಶೀಲಿಸಲಾಗಿದೆ.
ಕಾರಿನಲ್ಲಿದ್ದ 500 ರೂಪಾಯಿ ಮುಖಬೆಲೆಯ 4,337 ನಕಲಿ ನೋಟುಗಳು ಪತ್ತೆಯಾಗಿವೆ. ಇವುಗಳ ಒಟ್ಟು ಮೌಲ್ಯ 21,68,500 ರೂಪಾಯಿ ಎಂದು ಅಂದಾಜಿಸಲಾಗಿದೆ.
ಬಂಧಿತರನ್ನು ವಿಚಾರಣೆ ನಡೆಸಿದ ಬಳಿಕ ಪ್ರಕರಣದ ಜಾಲ ಕರ್ನಾಟಕದ ಹೊರಗೂ ವಿಸ್ತರಿಸಿರುವುದು ಬೆಳಕಿಗೆ ಬಂದಿದೆ. ತಮಿಳುನಾಡಿನ ಕೃಷ್ಣಗಿರಿ ಹಾಗೂ ತೆಲಂಗಾಣದ ಕೆಲವು ಪ್ರದೇಶಗಳಲ್ಲಿ ನಕಲಿ ನೋಟು ಮುದ್ರಿಸುವ ಚಟುವಟಿಕೆ ನಡೆಯುತ್ತಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಮಾಹಿತಿ ಆಧರಿಸಿ ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಿಂಟಿಂಗ್ ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ. ಅಲ್ಲಿಂದ 17 ಪ್ರಿಂಟಿಂಗ್ ಯಂತ್ರಗಳು, ಕಾಗದ, ನೋಟಿನ ಸ್ಟ್ರಿಪ್ಸ್ ಹಾಗೂ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಹೆಚ್ಚುವರಿ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಸತ್ಯಂ, ಮುರುಗೇಶ್, ಗೋವಿಂದನ್, ಬರ್ಕತ್, ಸರವಣನ್, ಲಕ್ಷ್ಮಣ ಹಾಗೂ ಕೃಷ್ಣ ಎಂಬ ಏಳು ಮಂದಿಯನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಒಂದು ಕಾರು ಹಾಗೂ ಎಂಟು ಮೊಬೈಲ್ ಫೋನ್ಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ಮಾಹಿತಿ ನೀಡಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಾಲದ ಹಿಂದೆ ಇರುವ ಇತರ ವ್ಯಕ್ತಿಗಳ ಕುರಿತು ತನಿಖೆ ಮುಂದುವರಿದಿದೆ. ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿದ್ದು, ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ನಕಲಿ ನೋಟುಗಳ ಜಾಲದ ಸಂಪೂರ್ಣ ಹಿನ್ನೆಲೆಯನ್ನು ತನಿಖೆ ಮೂಲಕ ಪತ್ತೆಹಚ್ಚಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



