*ಪೊಲೀಸ್ ಇಲಾಖೆಯಲ್ಲಿ 1700ಕ್ಕೂ ಹೆಚ್ಚು ವಾಹನಗಳು ನಿರುಪಯುಕ್ತಗೊಳಿಸಲು ತೀರ್ಮಾನ: ಗೃಹ ಸಚಿವ ಪರಮೇಶ್ವರ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ ಸುವರ್ಣಸೌಧ: ಪೊಲೀಸ್ ಇಲಾಖೆಯಲ್ಲಿ 1700ಕ್ಕೂ ಹೆಚ್ಚು ವಾಹನಗಳನ್ನು ಸ್ಕ್ರ್ಯಾಪ್ (ನಿರುಪಯುಕ್ತ)ಗೊಳಿಸಲು ತೀರ್ಮಾನಿಸಲಾಗಿದ್ದು,ಹಂತಹಂತವಾಗಿ ಅವುಗಳನ್ನು ನಿರುಪಯುಕ್ತಗೊಳಿಸಲಾಗುವುದು. 100ಕೋಟಿ ರೂ.ವೆಚ್ಚದಲ್ಲಿ ಹೊಸದಾಗಿ ವಾಹನಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ತಿಳಿಸಿದರು.
ವಿಧಾನಸಭೆಯಲ್ಲಿ ಸದಸ್ಯ ಶ್ರೀನಿವಾಸ ಜಿ.ಎಚ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಅಗ್ನಿಶಾಮಕ ಠಾಣೆ ಮತ್ತು ತುರ್ತು ಸೇವಾ ಇಲಾಖೆಯಲ್ಲಿ 15 ವರ್ಷಗಳ ಹಳೆಯ ವಾಹನಗಳನ್ನು ಅನುಪಯುಕ್ತಗೊಳಿಸುವ ಹಾಗೂ ಬದಲಿಗೆ ಹೊಸ ವಾಹನಗಳನ್ನು ಖರೀದಿಸಲು ಅನುಮತಿ ನೀಡುವ ಸಂಬಂಧ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ಜರುಗಿದ್ದು, ಸದರಿ ಸಭೆಯಲ್ಲಿ ಅವಧಿ ಮೀರಿದ ಮತ್ತು ಸುಸ್ಥಿತಿಯಲ್ಲಿರುವ ವಾಹನಗಳನ್ನು ನಿರುಪಯುಕ್ತಗೊಳಿಸಿದಲ್ಲಿ ಇಲಾಖೆಯ ಮೂಲ ಚಟುವಟಿಕೆಗಳಿಗೆ ತೊಂದರೆಯಾಗುವುದರಿAದ ವಾಹನಗಳ ನೋಂದಣಿ ಪತ್ರವನ್ನು ನವೀಕರಿಸಲು ಕೇಂದ್ರ ಸರಕಾರದ ಅನುಮತಿ ಪಡೆಯಲು ನಿರ್ಣಯ ಕೈಗೊಳ್ಳಲಾಗಿದ್ದು,ಅನುಮತಿ ಕೋರಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ.ಅನುಮತಿ ನಿರೀಕ್ಷಣೆಯಲ್ಲಿದ್ದೇವೆ ಎಂದರು.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ಅಗ್ನಿಶಾಮಕ ಠಾಣಾ ಕಟ್ಟಡ ನಿರ್ಮಾಣಕ್ಕಾಗಿ ರೂ.3ಕೋಟಿ ಅನುದಾನ ನಿಗದಿಪಡಿಸಿದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಮಸ್ಕಿಯಲ್ಲಿ ಅಗ್ನಿಶಾಮಕಠಾಣೆ:
ಅಗ್ನಿಕರೆಗಳ ಆಧರಿಸಿ ತೀರ್ಮಾನ: ಪ್ರಸ್ತುತ ಮಸ್ಕಿ ತಾಲೂಕಿನಲ್ಲಿ ನೂತನ ಅಗ್ನಿಶಾಮಕ ಠಾಣೆಯ ಸ್ಥಾಪನೆಗೆ ಸಹಮತಿ ನೀಡುವ ಅವಶ್ಯಕತೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಸಂಭವಿಸುವ ಅಗ್ನಿ ಕರೆಗಳನ್ನು ಆಧರಿಸಿ ನೂತನ ಅಗ್ನಿಶಾಮಕ ಠಾಣೆಯ ಸೃಜನೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ವಿಧಾನಸಭೆಯಲ್ಲಿ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ್(ಮಸ್ಕಿ) ಅವರ ಚುಕ್ಕೆಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
ಮಸ್ಕಿ ತಾಲೂಕಿನಲ್ಲಿ ನೂತನವಾಗಿ ಅಗ್ನಿಶಾಮಕ ಠಾಣೆ ಸ್ಥಾಪಿಸುವುದಕ್ಕೆ ಪ್ರಸ್ತಾವನೆಗೆ ಸಂಬಂಧಿಸಿದಂತೆ 2017ರಿಂದ 2022ರವರೆಗೆ ಒಟ್ಟಾರೆ 05 ವರ್ಷದ ಅವಧಿಯಲ್ಲಿ 243 ಅಗ್ನಿ ಕರೆಗಳು ಹಾಗೂ 13 ರಕ್ಷಣಾ ಕರೆಗಳಿದ್ದು, ಮಸ್ಕಿ ತಾಲೂಕಿನಲ್ಲಿ ಅಗ್ನಿ ಅವಘಡಗಳು ಸಂಭವಿಸಿದ್ದಲ್ಲಿ ಹತ್ತಿರವಿರುವ ಲಿಂಗಸೂಗುರು 30 ಕಿ.ಮೀ ಮತ್ತು ಸಿಂಧನೂರು 30 ಕಿ.ಮೀ ಅಂತರದಲ್ಲಿರುವ ಅಗ್ನಿಶಾಮಕ ಠಾಣೆಯಿಂದ ಬೆಂಕಿ ನಂದಿಸಲಾಗುತ್ತಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ