Kannada NewsKarnataka NewsPolitics

*ಹೆಲ್ಮೆಟ್ ಧರಿಸದೆ ಬೈಕ್ ಓಡಿಸಿದ ಶಾಸಕ ಪ್ರಕಾಶ್ ಕೋಳಿವಾಡ್‌ಗೆ ದಂಡ ವಿಧಿಸಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್ ಚಲಾಯಿಸಿದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ್ ಅವರಿಗೆ ಪೊಲೀಸರು ದಂಡ ವಿಧಿಸಿ ಶಾಕ್ ನೀಡಿದ್ದಾರೆ.

ಆಗಸ್ಟ್ 25ರಂದು ಶಾಸಕ ಪ್ರಕಾಶ್ ಕೋಳಿವಾಡ್ ಅವರು ಹೆಲ್ಮೆಟ್ ಧರಿಸದೆ ಬುಲೆಟ್ ಚಲಾಯಿಸಿಕೊಂಡು ಹೋಗುವ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ್ದರು. 

ಇದನ್ನು ಗಮನಿಸಿದ ರಾಣೇಬೆನ್ನೂರು ಟ್ರಾಫಿಕ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ 500 ರೂ. ದಂಡದ ನೋಟಿಸ್‌ ಅನ್ನು ನೇರವಾಗಿ ಶಾಸಕರ ಮನೆ ಬಾಗಿಲಿಗೆ ತಲುಪಿಸಿದ್ದಾರೆ. 

ನೋಟಿಸ್ ತಲುಪಿದ ಬೆನ್ನಲ್ಲೇ ಶಾಸಕರು ಕಾನೂನಿಗೆ ಗೌರವ ನೀಡಿ 500 ರೂಪಾಯಿ ದಂಡದ ಮೊತ್ತವನ್ನು ಪಾವತಿಸಿದ್ದಾರೆ.

ತಮಗೆ ದಂಡ ವಿಧಿಸಿರುವ ವಿಚಾರವನ್ನು ಸ್ವತಃ ಶಾಸಕ ಪ್ರಕಾಶ್ ಕೋಳಿವಾಡ್ ಅವರೇ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಎಸ್‌ಪಿ ಮೇಡಂ ಅವರು ನನಗೆ ನೋಟಿಸ್ ನೀಡಿದ್ದಾರೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದ್ದಾರೆ, ನಾನು ಅವರ ಈ ಕ್ರಮವನ್ನು ಗೌರವಿಸುತ್ತೇನೆ” ಎಂದು ಬರೆದುಕೊಳ್ಳುವ ಮೂಲಕ ಪೊಲೀಸರ ಕಾರ್ಯವೈಖರಿಯನ್ನು ಮೆಚ್ಚಿದ್ದಾರೆ.

ಶಾಸಕರಾಗಿದ್ದರೂ ನಿಯಮ ಉಲ್ಲಂಘಿಸಿದಾಗ ರಿಯಾಯಿತಿ ನೀಡದೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರ ಶಿಸ್ತು ಮತ್ತು ದಂಡ ಪಾವತಿಸಿ ತಪ್ಪು ಒಪ್ಪಿಕೊಂಡ ಶಾಸಕರ ನಡೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಸಂಚಾರ ನಿಯಮಗಳು ಜನಸಾಮಾನ್ಯರಿಗಷ್ಟೇ ಅಲ್ಲ, ಜನಪ್ರತಿನಿಧಿಗಳಿಗೂ ಒಂದೇ ಎಂಬುದನ್ನು ರಾಣೇಬೆನ್ನೂರು ಟ್ರಾಫಿಕ್ ಪೊಲೀಸರು ಈ ಮೂಲಕ ಸಾಬೀತುಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button