ಪ್ರಗತಿವಾಹಿನಿ ಸುದ್ದಿ: ಮೈಕ್ರೋ ಫೈನಾನ್ಸ್ ಸಿಬ್ಬಂದಿ ವಿರುದ್ಧ ದೂರು ನೀಡಲು ಹೋಗಿದ್ದ ಮಹಿಳೆಯರಿಗೆ ಪೊಲೀಸರು ದಂಡ ವಿಧಿಸಿರುವ ಘಟನೆ ನಡೆದಿದೆ.
ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ತೋರಿಸುತ್ತಿರುವ ಆರ್ಭಟಕ್ಕೆ ಜನ ಸಾಮಾನ್ಯರ ಬದುಕು ಬೀದಿಗೆ ಬಿದ್ದಿದೆ. ಮೈಕ್ರೋ ಫೈನಾನ್ಸ್ ಹೆಸರಲ್ಲಿ ಬಡ್ಡಿ ದಂಧೆಯೇ ಶುರುವಾಗಿದೆ ಎಂಬ ಆರೋಪ ಕೂಡ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಕೂಡ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಕಠಿಣ ಕಾನೂನು ರೂಪಿಸಲು ಸಿದ್ಧತೆ ನಡೆಸಿದೆ. ಈ ನಡುವೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ತಾಳಲಾರದೆ ಬೇಸತ್ತು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದ ರಾಣೆಬೆನ್ನೂರು ಗುಡ್ಡದ ಬೇವಿನಹಳ್ಳಿಯ ಇಬ್ಬರು ಮಹಿಳೆಯರಿಗೆ ಪೊಲೀಸ್ ಸಿಬ್ಬಂದಿ ಗದರಿಸಿ ದಂಡ ವಸೂಲಿ ಮಾಡಿದ ಆರೋಪ ಕೇಳಿ ಬಂದಿದೆ. ಹಲಗೇರಿ ಪೊಲೀಸರೇ ಈ ರೀತಿ ವರ್ತಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಜನ ಸಾಮಾನ್ಯರ ದೂರಿಗೆ ಸ್ಪಂದಿಸದ ಪೊಲೀಸರು ಮೈಕ್ರೋ ಫೈನಾನ್ಸ್ ಸಿಬ್ಬಂದಿ ದೂರಿಗೆ ಸ್ಪಂದಿಸಿದ್ದಾರೆ ಎಂದು ಆರೋಪ ಮಾಡಿ ಅಳಲು ತೋಡಿಕೊಂಡಿದ್ದಾರೆ ಮಹಿಳೆಯರು.
ಬೇವಿನಹಳ್ಳಿ ಗ್ರಾಮದ ನಾಗಮ್ಮ ಹಾಗೂ ರಹೀಮಾಗೆ ಈ ರೀತಿ ಪೊಲೀಸರು ಠಾಣೆಗೆ ಕರೆಸಿದ್ದು ಗದರಿಸಿ ದಂಡ ಕಟ್ಟಿಸಿಕೊಂಡ ಆರೋಪ ಕೇಳಿ ಬಂದಿದೆ. ಇದರ ಜೊತೆಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಅವಾಚ್ಯ ಪದಗಳ ಪ್ರಯೋಗ ಮಾಡಿರುವ ಆರೋಪ ಕೂಡ ಕೇಳಿ ಬಂದಿದೆ. ಈಗ ಸಂತ್ರಸ್ತ ಮಹಿಳೆಯರಿಂದ ಪೊಲೀಸರು 1,000 ರೂಪಾಯಿ ದಂಡ ವಸೂಲಿ ಮಾಡದ್ದಾರೆಂದು ಆರೋಪಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ