CrimeKannada NewsKarnataka NewsLatest

*ಮ್ಯಾಟ್ ಕ್ಯಾಸಿನೊ ಮೇಲೆ ಪೊಲೀಸರ ಭರ್ಜರಿ ಬೇಟೆ*: *15 ಜೂಜುಕೋರರ ಬಂಧನ*

ಹುಬ್ಬಳ್ಳಿಯಲ್ಲಿ ಗೋವಾ ಮಾದರಿ ಮ್ಯಾಟ್ ಕ್ಯಾಸಿನೊ ಮೇಲೆ ಗೋಕುಲ ಪೊಲೀಸರ ಭರ್ಜರಿ ಬೇಟೆ: 15 ಜೂಜುಕೋರರ ಬಂಧನ, 40,400 ನಗದು ಜಪ್ತಿ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಗೋವಾದಲ್ಲಿ ಹುಬ್ಬಳ್ಳಿಯ ಹಲವರು ಕ್ಯಾಸಿನೊ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದ್ದು, ಇದೀಗ ಹುಬ್ಬಳ್ಳಿಯ ಪ್ರತಿಷ್ಠಿತ ಗಾಂಧಿನಗರದಲ್ಲಿಯೇ ಗೋವಾ ಮಾದರಿಯ ಮ್ಯಾಟ್ ಸಿಸ್ಟಂ ಕ್ಯಾಸಿನೊ ನಡೆಸುತ್ತಿದ್ದ ಜಾಲವನ್ನು ಗೋಕುಲ ರಸ್ತೆ ಠಾಣೆ ಪೊಲೀಸರು ಭೇದಿಸಿದ್ದಾರೆ.

ಹುಬ್ಬಳ್ಳಿಯ ಗಾಂಧಿನಗರದ ಎಂಐಜಿ-2ರ 37ನೇ ನಂಬರಿನ ನಿವಾಸದಲ್ಲಿ ‘ಮ್ಯಾಟ್ ಸಿಸ್ಟಂ’ನಲ್ಲಿ ಕಾಯಿನ್ ನೀಡಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಅರವಿಂದನಗರದ ಅಮಿತ್ ಪ್ರಕಾಶ್ ಲದವಾ ಸಹಿತ 15 ಮಂದಿಯನ್ನು ಶನಿವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಸ್ಥಳದಿಂದ 40,400 ರೂ. ನಗದು, ಇಸ್ಪೀಟ್ ಎಲೆಗಳು, ಮ್ಯಾಟ್ ಸೇರಿದಂತೆ ಜೂಜಾಟಕ್ಕೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ವಿನಯ್ ಕಬಾಡೆ, ಸಾಯಿ ದಾನಿ, ಹನೀಫ್ ಬಿಜಾಪುರ, ಕೃಷ್ಣ ಪೋಳ, ಅಕ್ಷಯ ಕಾಮುಕರ, ನಿತಿನ್ ನಾಕೋಡ, ಸುರೇಶ್ ತಲಪಾರಿ, ಸುಮಿತ್ ಮಿಸ್ಕಿನ್, ಗುರುಸಿದ್ಧಪ್ಪ ಶೆಲ್ಲಿ ಕೇರಿ, ಆದಿತ್ಯ ಹಬೀಬ್, ಅಸ್ಲಾಂ ಕಾಜಾಪಲ್ಲಿ, ಕಿಶನ್ ಲದವಾ, ರಾಜೇಶ್ ಮೋಟಕುರಿ, ಲೆನ್ನಿ ದಮ್ಮು, ರವಿ ಹಬೀಬ್ ಎಂದು ಗುರುತಿಸಲಾಗಿದೆ. ಈ ಜಾಲದ ಪ್ರಮುಖ ಪಾಲುದಾರರಾದ ತುಳಜಪ್ಪ ಮತ್ತು ರಾಹುಲ್ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅಮಿತ್ ತಂಡ ಹುಬ್ಬಳ್ಳಿಯಲ್ಲಿ ಮೂರ್ನಾಲ್ಕು ಮನೆಗಳನ್ನು ಬಾಡಿಗೆಗೆ ಪಡೆದು ಗೋವಾ ಮಾದರಿ ಮ್ಯಾಟ್ ಸಿಸ್ಟಂ ಎಲೆ ಕಟ್ಟುವ ಜೂಜಾಟ ನಡೆಸುತ್ತಿತ್ತು. ರಾತ್ರಿ ಗಸ್ತು ವೇಳೆ ಎಎಸ್ಐ ಎಸ್. ಟಿ. ಗೋಡಚಪ್ಪನವರ ತಂಡಕ್ಕೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಈ ಕುರಿತು ಗೋಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಸಚಿನ್ ದಾಸರಡ್ಡಿ ಅವರು ತನಿಖೆ ನಡೆಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button