ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ
ಪ್ರಗತಿವಾಹಿನಿ ಸುದ್ದಿ: ಯುವಕರೇ ಈ ದೇಶದ ಸಂಪತ್ತು. ಅವರು ಮಾದಕವಸ್ತುಗಳ ವ್ಯಸನಿಗಳಾಗದಂತೆ ಜಾಗೃತಿ ಮೂಡಿಸಲು ಸರ್ಕಾರ ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದೊಂದಿಗೆ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ‘ಪೊಲೀಸ್ ರನ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಕರು ಮಾದಕವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಕರ್ನಾಟಕ ಮತ್ತು ಬೆಂಗಳೂರು ಮಾದಕವಸ್ತು ಮುಕ್ತವಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಬೆಂಗಳೂರನ್ನು ಹಸಿರಾಗಿಸಬೇಕು
ಹಸಿರು ಕಡಿಮೆಯಾಗುತ್ತಿರುವ ಬೆಂಗಳೂರನ್ನು ಪುನಃ ಹಸಿರು ನಗರವನ್ನಾಗಿಸುವುದು ಹಾಗೂ ಯುವಕರು ಆರೋಗ್ಯವಂತರಾಗಿ ಬದುಕಬೇಕು ಎನ್ನುವುದು ಉದ್ದೇಶದಿಂದ ಪೊಲೀಸ್ ಓಟ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜನರು ಸಮಾಜದ ಆಸ್ತಿಯಾಗಬೇಕು
ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಬೇಕಿದೆ. ಸೈಬರ್ ಅಪರಾಧಗಳನ್ನು ಮಾಡಬಾರದು ಎಂಬ ಮನೋಭಾವವೂ ಬೆಳೆಯಬೇಕು. ಜನರು ಸಮಾಜದ ಆಸ್ತಿಯಾಗಬೇಕು ಎಂದು ತಿಳಿಸಿದರು.
ಗೃಹ ಸಚಿವ ಜಿ.ಪರಮೇಶ್ವರ್, ಎಸ್.ಬಿ.ಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗೋವಿಂದರಾಜು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ