ಪ್ರಗತಿವಾಹಿನಿ ಸುದ್ದಿ, ಮೈಸೂರು: ನಗರದಲ್ಲಿ ನಂಜನಗೂಡು ರಸ್ತೆಯಲ್ಲಿ ನಿರ್ಮಿಸಿರುವ ಗುಂಬಜ್ ಮಾದರಿಯ ಬಸ್ ಪ್ರಯಾಣಿಕರ ತಂಗುದಾಣ ವಿವಾದದ ಕೇಂದ್ರಬಿಂದುವಾಗಿದೆ. ಆಕ್ಷೇಪಗಳ ಹಿನ್ನೆಲೆಯಲ್ಲಿ ನಿಲ್ದಾಣದ ಕಾಮಗಾರಿ ಸದ್ಯ ಸ್ಥಗಿತಗೊಳಿಸಿದ್ದು ಪೊಲೀಸ್ ಬಿಗು ಬಂದೋಬಸ್ತು ಏರ್ಪಡಿಸಲಾಗಿದೆ.
ಬಸ್ ತಂಗುದಾಣದ ಮೇಲೆ ರಾತ್ರೋರಾತ್ರಿ ಪ್ರಧಾನಿ ನರೇಂದ್ರ ಮೋದಿ, ಸುತ್ತೂರು ದೇಶಿಕೇಂದ್ರ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೋಟೋ ಹಾಕಲಾಗಿದೆ. ಈ ಹಿನ್ನೆಲೆ ಬಸ್ ನಿಲ್ದಾಣದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
“ಬೆಂಗಳೂರು-ಊಟಿ ರಸ್ತೆಯ ಜೆ.ಎಸ್. ಎಸ್ ಕಾಲೇಜು ಬಳಿ ನಿರ್ಮಿಸಿರುವ ಗುಂಬಜ್ ಮಾದರಿಯ ಬಸ್ ನಿಲ್ದಾಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗ್ತಿದೆ. ಹಾಗಾಗಿ, ಬಸ್ ಶೆಲ್ಟರ್ ಮೇಲಿನ ಗುಂಬಜ್ ತೆರವು ಮಾಡಬೇಕು, ಇಲ್ಲದಿದ್ದರೆ ನಾನೇ ತೆರವು ಮಾಡುತ್ತೇನೆ,” ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೆಆರ್ ಕ್ಷೇತ್ರದ ಶಾಸಕ ಎಸ್. ಎ. ರಾಮದಾಸ್, ಮೈಸೂರು ನಗರದ ಪಾರಂಪರಿಕ ಮಹತ್ವದ ಹಿನ್ನೆಲೆಯಲ್ಲಿ ತಂಗುದಾಣ ವಿನ್ಯಾಸಗೊಳಿಸಲಾಗಿದೆಯೇ ಹೊರತು, ಯಾವುದೇ ಧರ್ಮದ ಆಧಾರದ ಮೇಲಲ್ಲ. ಇದನ್ನು ಮುಸ್ಲಿಂ ಗುತ್ತಿಗೆದಾರ ನಿರ್ಮಿಸಿದ್ದಾರೆ ಎಂಬುದು ಸುಳ್ಳು ಎಂದು ಹೇಳಿದ್ದರು.
ವಿವಾದ ಭುಗಿಲೇಳುತ್ತಿದ್ದಂತೆ ಮಂಗಳವಾರ ರಾತ್ರೋರಾತ್ರಿ ಬೊಮ್ಮಾಯಿ, ಸುತ್ತೂರು ಶ್ರೀ ಫೋಟೋ ಹಾಕಲಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಜೊತೆಗೆ ಬಸ್ ತಂಗುದಾಣಕ್ಕೆ ಮೈಸೂರು ನಗರ ನೂತನ ಪೊಲೀಸ್ ಆಯುಕ್ತ ಬಿ. ರಮೇಶ್, ಮೈಸೂರು ನಗರ ಡಿಸಿಪಿ ಪ್ರದೀಪ್ ಗುಂಟಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಕೆಆರ್ಐಡಿಎಲ್ ಕಾಮಗಾರಿ ತಡೆ ಹಿಡಿದಿದ್ದು, ಮುಂದಿನ ಆದೇಶದವರೆಗೂ ಯಾವುದೇ ಕಾಮಗಾರಿ ನಡೆಸದಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಕೆಲಸಗಾರರನ್ನು ಸ್ಥಳದಿಂದ ವಾಪಸ್ ಕಳಿಸಿದ್ದಾರೆ.
ಈ ನಡುವೆ ಸಂಸದ ಪ್ರತಾಪ್ ಸಿಂಹ ಮಾತ್ರ ಗುಂಬಜ್ ಮಾದರಿಯ ನಿಲ್ದಾಣವನ್ನು ತೆರವುಗೊಳಿಸುವುದು ಶತಸಿದ್ಧ ಎಂದು ಹೇಳಿದ್ದಾರೆ.
*ಆವಿಷ್ಕಾರದ ಜೊತೆಗೆ ಅಭಿವೃದ್ಧಿಗೆ ಪೂರಕ ಕೆಲಸ ಮಾಡಲು ಉದ್ಯಮಿಗಳಿಗೆ ಸಿಎಂ ಕರೆ*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ