ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪೊಲೀಸ್ ಇಲಾಖೆಗೆ ತನ್ನದೇ ಆದ ಘನತೆ ಹಾಗೂ ಗೌರವವಿದೆ. ನಮ್ಮ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಇಂತಹ ಮಹತ್ತರ
ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಪಡೆದ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು ಎಂದು
ಬೆಳಗಾವಿ ನಗರದ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಹೇಳಿದರು.
ಪಟ್ಟಣದ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯಲ್ಲಿ ಮಂಗಳವಾರ ಜರುಗಿದ ಸಶಸ್ತ್ರ
ಪೊಲೀಸ್ ಪೇದೆಗಳ ಮೂರನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ
ಅತಿಥಿಯಾಗಿ ಭಾಗವಹಿಸಿದ್ದ ಅವರು ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆಯನ್ನು
ಸ್ವೀಕರಿಸಿ ಮಾತನಾಡಿದರು.
ತರಬೇತಿ ಶಾಲೆಯಲ್ಲಿ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿ ತಮ್ಮ
ಮಾತೃಘಟಕಗಳಿಗೆ ತೆರಳಿ ಪೂರ್ಣಾವಧಿ ಸೇವೆಗೆ ಸನ್ನದ್ಧರಾಗುತ್ತಿರುವ ಪ್ರತಿಯೊಬ್ಬ
ಸಶಸ್ತ್ರ ಪೊಲೀಸರು ತರಬೇತಿಯಲ್ಲಿ ಕಲಿತಿರುವ ವಿಷಯಗಳನ್ನು ಕರ್ತವ್ಯದಲ್ಲಿ
ಅಳವಡಿಸಿಕೊಳ್ಳಬೇಕು. ಸಂಯಮ ಮತ್ತು ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಬೇಕು. ಪೊಲೀಸ್
ಇಲಾಖೆಯ ಘನತೆ, ಗೌರವ ಕಾಪಾಡಲು ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರು.
ಪಥ ಸಂಚಲನದಲ್ಲಿ ರಾಜ್ಯದ 19 ಜಿಲ್ಲೆಗಳ 184 ಪ್ರಶಿಕ್ಷಣಾರ್ಥಿಗಳು ಭಾಗವಹಿಸಿ ಆಕರ್ಷಕ
ಪಥ ಸಂಚಲನವನ್ನು ನಡೆಸಿಕೊಟ್ಟರು. ಪರೇಡ್ ಕಮಾಂಡರ್ ವಿಠ್ಠಲ ಜಾಬಗೌಡರ, ಉಪ ಕಮಾಂಡರ್ ಸೋಮಯ್ಯ ಮಠಪತಿ ಪಥ ಸಂಚಲನದ ನೇತೃತ್ವ ವಹಿಸಿದ್ದರು. ತರಬೇತಿಯ ಅವಧಿಯಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿದ ಒಟ್ಟು 10 ಪ್ರಶಿಕ್ಷಣಾರ್ಥಿಗಳಿಗೆ
ಕೆ.ತ್ಯಾಗರಾಜನ್ ಬಹುಮಾನವನ್ನು ವಿತರಿಸಿದರು. ಪಥ ಸಂಚಲನದಲ್ಲಿ ಭಾಗವಹಿಸಿದ್ದ
ಕಮಾಂಡರ್ ಕನ್ನಡದಲ್ಲಿ ಅಪ್ಪಣೆಗಳನ್ನು ಮಂಡಿಸಿದ್ದು ಅದಕ್ಕೆ ಪ್ರಶಿಕ್ಷಣಾರ್ಥಿಗಳು
ಕನ್ನಡದಲ್ಲೇ ಸ್ಪಂದಿಸಿದ್ದು ವಿಶೇಷ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿ ಎಸ್.ಪಿ ಲಕ್ಷ್ಮಣ ನಿಂಬರಗಿ, ಬೆಳಗಾವಿ ಪೊಲೀಸ್ ತರಬೇತಿ
ಶಾಲೆಯ ಪ್ರಾಚಾರ್ಯ ರವಿ ಬೋರಗಾವಿ, ಧಾರವಾಡ ತರಬೇತಿ ಶಾಲೆಯ ಪ್ರಾಚಾರ್ಯ ಉಮೇಶ ಪಿ,
ಕೆ.ಎಸ್.ಆರ್.ಪಿ ಕಮಾಂಡಂಟ್ ಹಮ್ಜಾ ಹುಸೇನ್, ಡಿಎಆರ್ ಎಸ್.ಪಿ ವೈ.ಎಸ್ ಕಾಶಪ್ಪನವರ,
ಖಾನಾಪುರ ಠಾಣೆಯ ಇನ್ಸಪೆಕ್ಟರ್ ಸುರೇಶ ಶಿಂಗಿ, ತರಬೇತಿ ಶಾಲೆಯ ಇನ್ಸಪೆಕ್ಟರ್.ಗಳಾದ
ಪರಶುರಾಮ ಪೂಜೇರಿ, ಎಸ್.ಬಿ ಮದಿಹಳ್ಳಿ, ಎಸ್.ಎಂ ತಹಸೀಲ್ದಾರ್, ಜಿ.ಐ ಕಲ್ಯಾಣಶೆಟ್ಟಿ,
ಬಿ.ಎಸ್ ಮಂಡು, ಬಿ.ಎಂ ಸೂರಿ, ಕೆ.ಎಸ್ ರಾಯಮಾನೆ, ಎ.ಬಿ ಜಮಾದಾರ, ಎಸ್.ಪಿ ಮುರಗೋಡ,
ಪಿ.ಎಸ್ ಪಾಟೀಲ ಸೇರಿದಂತೆ ಇಲಾಖೆಯ ಹಾಲಿ ಹಾಗೂ ಮಾಜಿ ಅಧಿಕಾರಿಗಳು, ಸಿಬ್ಬಂದಿ,
ಪ್ರಶಿಕ್ಷಣಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.
ತರಬೇತಿ ಶಾಲೆಯ ಪ್ರಾಚಾರ್ಯ ಅಮಸಿದ್ಧ ಗೋಂಧಳೆ ಪ್ರಶಿಕ್ಷಣಾರ್ಥಿಗಳಿಗೆ
ಪ್ರತಿಜ್ಞಾವಿಧಿಯನ್ನು ಬೋಧಿಸಿ ತರಬೇತಿ ಶಾಲೆಯ ವರದಿಯನ್ನು ಓದಿದರು. ಎಸ್.ಡಿ
ಸತ್ಯನಾಯಿಕ ಸ್ವಾಗತಿಸಿದರು. ಡಾ.ವೈ.ಪಿ ಕಲ್ಲನಗೌಡರ್ ಮತ್ತು ಸ್ವಪ್ನಾ ಹಾವನೂರ
ನಿರೂಪಿಸಿದರು. ಎನ್.ಡಿ ಸನದಿ ವಂದಿಸಿದರು.
ಮಿಲಿಟರಿ ಆಸ್ಪತ್ರೆ ಬಳಿ ಸರಣಿ ಸ್ಫೋಟ; 19 ಜನರು ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ