Latest

*ಪೊಲೀಸ್ ಠಾಣೆ ನಿಷೇಧಿತ ಪ್ರದೇಶವಲ್ಲ; ವಿಡಿಯೋ ರೆಕಾರ್ಡಿಂಗ್ ತಪ್ಪಲ್ಲ; ಹೈಕೋರ್ಟ್ ಅಭಿಪ್ರಾಯ*

 ಪ್ರಗತಿವಾಹಿನಿ ಸುದ್ದಿ; ಮುಂಬೈ: ಪೊಲೀಸ್ ಠಾಣೆಯು ನಿಷೇಧಿತ ಪ್ರದೇಶವಲ್ಲ. ಹೀಗಾಗಿ ಪೊಲೀಸ್ ಠಾಣೆಯೊಳಗೆ ವಿಡಿಯೊ ಚಿತ್ರೀಕರಣ ಮಾಡುವುದು ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠ ಮಹತ್ವದ ತೀರ್ಪು ನೀಡಿದೆ.

ಪೊಲೀಸ್ ಠಾಣೆಯೊಳಗೆ ವೀಡಿಯೊ ರೆಕಾರ್ಡಿಂಗ್ ಮಾಡಿದ್ದಕ್ಕಾಗಿ ಪೊಲೀಸರು ಅಧಿಕೃತ ರಹಸ್ಯಗಳ ಕಾಯ್ದೆ ಅಡಿ ದಾಖಲಿಸಿರುವ ಎಫ್ಐಆರ್ ನ್ನು ರದ್ದುಪಡಿಸುವಂತೆ ಕೋರಿ ರವೀಂದ್ರ ಉಪಾಧ್ಯಾಯ ಎಂಬುವರು ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಮನೀಶ್ ಪಿತಳೆ ಹಾಗೂ ನ್ಯಾ. ವಾಲ್ಮಿಕಿ ಮೆನೆಜಿಸ್ ಅವರಿದ್ದ ಪೀಠ, ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 2(8) ರಲ್ಲಿ ವ್ಯಾಖ್ಯಾನಿಸಿರುವ ನಿಷೇಧಿತ ಸ್ಥಳ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆಯು ಬರುವುದಿಲ್ಲ.
ಹೀಗಾಗಿ ಅರ್ಜಿದಾರರ ವಿರುದ್ಧ ಈ ಕಾಯ್ದೆ ಅಡಿ ದಾಖಲಿಸಿರುವ ಎಫ್ಐಆರ್ ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೇ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ರದ್ದುಪಡಿಸಿ ಆದೇಶಿಸಿದೆ.

ಏನಿದು ಪ್ರಕರಣ?

ಮಾರ್ಚ್‌ 2018ರಲ್ಲಿ ರವೀಂದ್ರ ಉಪಾಧ್ಯಾಯ ಎಂಬುವವರು ನೆರೆ ಮನೆಯ ವ್ಯಕ್ತಿಯೊಂದಿಗಿನ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಪತ್ನಿಯೊಂದಿಗೆ ವಾದ್ರಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಈ ವೇಳೆ ನೆರೆ ಮನೆ ವ್ಯಕ್ತಿ ಕೂಡ ಪ್ರತಿ ದೂರು ದಾಖಲಿಸಿದ್ದರು.
ಈ ವೇಳೆ ಠಾಣೆಯಲ್ಲಿ ನಡೆಯುವ ಮಾತುಕತೆಯನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು. ಮೊಬೈಲ್ ನಲ್ಲಿ ಚಿತ್ರೀಕರಿಸುವುದು ತಿಳಿದ ಪೊಲೀಸರು ರವೀಂದ್ರ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿದ್ದರು. ನಂತರ ಎಫ್ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ರವೀಂದ್ರ ಉಪಾಧ್ಯಾಯ ಹೈಕೋರ್ಟ್ ಮೆಟ್ಟಿಲೇರಿದ್ದರು.

*ನೀರಾವರಿ ದಶಕ ಘೋಷಿಸಿದ ಸಿಎಂ ಬೊಮ್ಮಾಯಿ*

https://pragati.taskdun.com/cm-basavaraj-bomaiyadagiri-neeravari-dashaka/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button