*ಕಂಡಕ್ಟರ್ ಪತ್ನಿಯನ್ನು ಕೊಂದ ಪೊಲೀಸ್ ಪತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಂಡಕ್ಟರ್ ಆಗಿದ್ದ ಪತ್ನಿಯನ್ನು ಪೊಲೀಸ್ ಪತಿಯೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಶವ್ವ ಕರೀಕಟ್ಟಿ (34) ಅವರನ್ನು ಅವರ ಪತಿ ನಿಪ್ಪಾಣಿ ಠಾಣೆ ಕಾನ್ಸೆಬಲ್ ಸಂತೋಷ ಕಾಂಬಳೆ (35) ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ.
ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಕಾಶವ್ವ ಮತ್ತು ಸಂತೋಷ 2013ರಲ್ಲಿ ವಿವಾಹವಾಗಿದ್ದರು. ಕಾಶವ್ವ ಅವರು ನಿಪ್ಪಾಣಿಯಿಂದ ಸವದತ್ತಿ ಡಿಪೊಗೆ ವರ್ಗಾವಣೆ ಪಡೆದುಕೊಂಡಿದ್ದರು. ಸವದತ್ತಿಯ ರಾಮಾಪುರ ಬಡಾವಣೆ ಮನೆಯಲ್ಲಿ ವಾಸವಾಗಿದ್ದರು. ಪತಿ ಸಂತೋಷನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಸಂತೋಷ್ ಅವರನ್ನು ಪೊಲೀಸ್ ಸೇವೆಯಿಂದ ಅಮಾನತು ಮಾಡಲಾಗಿತ್ತು.
ಆಕ್ಟೋಬರ್ 13 ರಂದು ಸಂತೋಷ್, ಕಾಶವ್ವ ಮನೆಗೆ ಹೋಗಿದ್ದ ವೇಳೆ ಇಬ್ಬರ ನಡುವೆ ಜಗಳವಾಗಿತ್ತು. ಬಳಿಕ ಮಾರಕಾಸ್ತ್ರದಿಂದ ಕಾಶವ್ವಗೆ ಇರಿದು ಕೊಲೆ ಮಾಡಿ ಬೀಗ ಹಾಕಿಕೊಂಡು ಸಂತೋಷ್ ಪರಾರಿಯಾಗಿದ್ದ. ನಾಲ್ಕೈದು ದಿನಗಳ ನಂತರ ದುರ್ನಾತ ಬೀರುತ್ತಿದ್ದ ಶವ ಪತ್ತೆಯಾಗಿದ್ದು, ಕೊಲೆ ಆರೋಪಿ ಸಂತೋಷ್ ನನ್ನು ಸವದತ್ತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.