
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಈಗಾಗಲೇ ರಾಜ್ಯ ವಿಧಾನಸಭೆಯಲ್ಲಿ ಭರ್ಜರಿ ವಿಜಯ ಸಾಧಿಸಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ಬರುವ ಲೋಕಸಭೆ ಚುನಾವಣೆಗೆ ಗಂಭಿರವಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದೇ ವೇಳೆ ರಾಜ್ಯದ ಏಕೈಕ ಕಾಂಗ್ರೆಸ್ ಸಂಸದ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಅವರು ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್ “ರಾಜಕಾರಣದಲ್ಲಿ ನೆಮ್ಮದಿ ಎನ್ನುವುದೇ ಇಲ್ಲ. ಜೊತೆಗಿರುವ ಜನರಿಗೂ ನೆಮ್ಮದಿ ಇಲ್ಲ. ಜೊತೆಗೆ ಇರುವವರ ಬಳಿಯೂ ನೆಮ್ಮದಿ ಇಲ್ಲ. ರಾಜಕಾರಣ ಸಾಕಾಗಿದೆ. ಹೀಗಾಗಿ ರಾಜಕಾರಣದಿಂದ ದೂರ ಉಳಿಯುತ್ತೇನೆ”ಎಂದಿದ್ದಾರೆ.
“ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟ ಪಟ್ಟವರು ಸಂತೋಷವಾಗಿ ಅಧಿಕಾರದಲ್ಲಿದ್ದಾರೆ. ಸಂತೋಷವಾಗಿ ಅನುಭವಿಸಲಿ. ನನಗೆ ರಾಜಕಾರಣ ಬೇಡ. ನಾನು ನನ್ನ ಮನಸ್ಸಿನ ವಿಚಾರವನ್ನು ಕಾರ್ಯಕರ್ತರಿಗೆ ಈಗಾಗಲೇ ತಿಳಿಸಿದ್ದೇನೆ. ಸಾಕಷ್ಟು ನಾಯಕರಿದ್ದಾರೆ. ಅನ್ಯರಿಗೂ ಅವಕಾಶ ಸಿಗಬೇಕು ಎಂಬುದು ನನ್ನ ಉದ್ದೇಶ. ನಾನು ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧ” ಎಂದು ಡಿ.ಕೆ. ಸುರೇಶ್ ಹೇಳಿದರು.
“ಲೋಕಸಭೆ ಚುನಾವಣೆ ಘೋಷಣೆಗೆ ಇನ್ನೂ 11 ತಿಂಗಳು ಬಾಕಿ ಇದೆ. ಕ್ಷೇತ್ರದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ಪಕ್ಷ ಸಂಘಟನೆ ಒಂದು ಭಾಗ. ಚುನಾವಣಾ ಸ್ಪರ್ಧೆ ಮಾಡಿ ಗೆಲ್ಲುವುದು ಇನ್ನೊಂದು ಭಾಗ. ನನಗೆ ಕೆಲಸ ಮಾಡಿರುವ ಬಗ್ಗೆ ತೃಪ್ತಿಯಿದೆ” ಎನ್ನುತ್ತಲೇ “ನನಗೆ ವೈರಾಗ್ಯ ಬಂದಿಲ್ಲ” ಎಂದೂ ಹೇಳಿದರು.
“ಪಕ್ಷ ಅಧಿಕಾರಕ್ಕೆ ಬರುವಲ್ಲಿ ನಮ್ಮ ಶ್ರಮವಿಲ್ಲ. ಈಗ ಯಾರೆಲ್ಲ ಅಧಿಕಾರ ಮಾಡುತ್ತಿದ್ದಾರೋ ಅವರದಷ್ಟೇ ಶ್ರಮವಿದೆ. ಅವರೆಲ್ಲ ನೆಮ್ಮದಿಯಾಗಿ ಎಂಜಾಯ್ ಮಾಡಲಿ. ನನಗೆ ವಿಶ್ರಾಂತಿ ಬೇಕು. ರಾಜಕಾರಣಿಗಳ ಬಗ್ಗೆ ಜನರಿಗೆ ಒಳ್ಳೆಯ ಭಾವನೆಯಿಲ್ಲ. ಬರೀ ಗೊಂದಲಗಳೇ ಹೆಚ್ಚಿವೆ. ಹೀಗಾಗಿ ಯಾಕೋ ರಾಜಕೀಯ ಸರಿ ಎನಿಸುತ್ತಿಲ್ಲ” ಎಂದು ಡಿ.ಕೆ. ಸುರೇಶ್ ಹೇಳಿದರು.