Latest

ರಮೇಶ್ ಜಾರಕಿಹೊಳಿ ವಿರುದ್ಧ ತಿರುಗಿ ಬಿದ್ದರಾ ಮಿತ್ರಮಂಡಳಿ ಸದಸ್ಯರು?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಚಿವಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಸರತ್ತು ಮುಂದುವರಿಸಿರುವ ಬೆನ್ನಲ್ಲೇ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಕಾರಣರಾಗಿದ್ದ 17 ಶಾಸಕರಲ್ಲೇ ಒಡಕಿನ ಧ್ವನಿ ಕೇಳಿಬಂದಿದೆ.

ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರ ಕೆಡವಿ ಬಿಜೆಪಿ ಸರಕಾರ ರಚನೆಗೆ 17 ಶಾಸಕರು ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಒಂದಾಗಿ ಬಂದಿದ್ದರು. ಆ ನಂತರ ಹಲವಾರು ಸ್ಥಿತ್ಯಂತರಗಳ ನಡುವೆ ಯಡಿಯೂರಪ್ಪ ಸರಕಾರ ರಚನೆಯಾಗಿದ್ದಲ್ಲದೆ ಕೆಲವರು ಅಂತೂ ಇಂತೂ ಮಂತ್ರಿಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲ 17 ಶಾಸಕರಿಗೂ ಮಂತ್ರಿಸ್ಥಾನ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಅದೇ ಭರವಸೆಯನ್ನು ರಮೇಶ ಜಾರಕಿಹೊಳಿ ತಮ್ಮ 16 ಸಹವರ್ತಿಗಳಿಗೂ ನೀಡಿದ್ದರು.

ಆದರೆ ನಂತರದ ಬೆಳವಣಿಗೆಯಲ್ಲಿ ಕೆಲವರಿಗೆ ಸಚಿವಸ್ಥಾನ ಸಿಗಲೇ ಇಲ್ಲ. ಕೆಲವರು ಚುನಾವಣೆಯಲ್ಲಿ ಪರಾಭವಗೊಂಡರೆ ಇನ್ನು ಕೆಲವರ ಕ್ಷೇತ್ರಗಳಲ್ಲಿ ಚುನಾವಣೆಯೇ ನಡೆದಿರಲಿಲ್ಲ. ಅಥಣಿಯ ಮಹೇಶ ಕುಮಟಳ್ಳಿ ಚುನಾವಣೆಯಲ್ಲಿ ಗೆದ್ದರೂ ಸಚಿವರಾಗಲಿಲ್ಲ.

ಈಗ ಇನ್ನೂ ಕೆಲವರು ಸಚಿವರಾಗಬೇಕಿದೆ. ಯಡಿಯೂರಪ್ಪ ಮತ್ತು ರಮೇಶ ಜಾರಕಿಹೊಳಿ ನೀಡಿದ್ದ ಭರವಸೆಯನ್ನು ಈಡೇರಿಸಬೇಕಿದೆ. ಆದರೆ ಹೈಕಮಾಂಡ್ ಕೃಪೆಗಾಗಿ ಕಾಯಬೇಕಾಗಿದೆ. ಇದಕ್ಕಾಗಿ ಯಡಿಯೂರಪ್ಪ ಹಲವು ಬಾರಿ ದೆಹಲಿಗೆ ಹೋಗಿಬಂದಿದ್ದಾರೆ. ರಮೇಶ ಜಾರಕಿಹೊಳಿ ಕೂಡ ಬಿಜೆಪಿ ಮುಖಂಡ ಬಿ.ಎಲ್.ಸಂತೋಷ ಅವರನ್ನು 2 -3 ಬಾರಿ ಭೇಟಿಯಾಗಿದ್ದಾರೆ.

ಸಚಿವರಾಗುವ ಅವಕಾಶ ಬಾರದ್ದರಿಂದ 17 ಜನ ಸದಸ್ಯರ ಮಿತ್ರಮಂಡಳಿಯಲ್ಲಿ ಈಗ ಒಡಕು ಕಾಣಿಸಿದೆ. ಅವರೆಲ್ಲ ಸಚಿವ ರಮೇಶ ಜಾರಕಿಹೊಳಿ ವಿರುದ್ಧವೇ ಅಸಮಾಧಾನಗೊಂಡಿದ್ದಾರೆ. ಈ ಕುರಿತು ಚರ್ಚಿಸಲು ಇಂದು ರಾತ್ರಿ ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಸಭೆ ನಡೆಸಲು ಮುಂದಾಗಿದ್ದಾರೆ. ರಮೇಶ ಜಾರಕಿಹೊಳಿ ಹೊರಗಿಟ್ಟು ಇತರರು ಸಭೆ ಸೇರುತ್ತಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ಮತ್ತೊಮ್ಮೆ ಕುತೂಹಲ ಮೂಡಿಸಿದೆ. ಇನ್ನು 2 -3 ದಿನದಲ್ಲಿ ಭಾರಿ ಬೆಳವಣಿಗೆಗಳು ಕಾಣುವ ಲಕ್ಷಣಗಲಿವೆ. ಮೂಲ ಬಿಜೆಪಿಗರು, ವಲಸಿಗರು ಎನ್ನುವ ಧ್ವನಿ ಕೂಡ ಕೇಳಿಬರುತ್ತಿದೆ. ಸಚಿವಸಂಪುಟ ವಿಸ್ತರಣೆ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಇನ್ನೂ ಏನೇನು ನಡೆಯಬೇಕಿದೆಯೋ…

ಸಂಪುಟ ವಿಸ್ತರಣೆ: ಯಡಿಯೂರಪ್ಪ ಮುಖದಲ್ಲಿ ಕಾಣದ ಗೆಲುವು

ಕುತೂಹಲ ಮೂಡಿಸಿದ ಬಿ.ಎಲ್.ಸಂತೋಷ್-ಸಿಎಂ ಯಡಿಯೂರಪ್ಪ ಭೆಟಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button