GIT add 2024-1
Beereshwara 33

ಹತಾಶ ಬಿಜೆಪಿಯಿಂದ ಸಾವಿನ ಮನೆಯಲ್ಲಿ ರಾಜಕೀಯ: ಚನ್ನರಾಜ ಹಟ್ಟಿಹೊಳಿ ಆಕ್ರೋಶ; ಬೃಹತ್ ರ್‍ಯಾಲಿ ನಡೆಸಿದ ಕಾಂಗ್ರೆಸ್

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚುನಾವಣೆಗೆ ಹೋಗಲು ಯಾವುದೇ ವಿಷಯವಿಲ್ಲದೆ ಹತಾಶರಾಗಿರುವ ಭಾರತೀಯ ಜನತಾಪಾರ್ಟಿವರು ನೇಹಾ ಹಿರೇಮಠ ಸಾವಿನ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕಿಳಿದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಮಂಗಳವಾರ ನೇಹಾ ಹಿರೇಮಠ ಆತ್ಮಕ್ಕೆ ಶಾಂತಿ ಸಿಗಲಿ, ಅಪರಾಧಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ರ್‍ಯಾಲಿಯ ಸಂದರ್ಭದಲ್ಲಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

ನೇಹಾ ಹಿರೇಮಠ ಆತ್ಮಕ್ಕೆ ಶಾಂತಿ ಸಿಗಲಿ, ನ್ಯಾಯ ಸಿಗಲಿ ಎಂದು ಈ ರ್‍ಯಾಲಿಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇವೆ. ಇಂತಹ ನೀಚ ಕೃತ್ಯವನ್ನು ವಿಕೃತ ಮನುಷ್ಯನಷ್ಟೇ ಮಾಡಬಹುದು. ಕಾನೂನು ಪ್ರಕಾರ ಅಪರಾಧಿಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಸರಕಾರ ಈಗಾಗಲೆ ಮಹಿಳೆಯರಿಗೆ ಆಗುವ ಅನ್ಯಾಯ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲೆಂದು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲು ನಿರ್ಧರಿಸಿದೆ. ತನ್ಮೂಲಕ ಮಹಿಳೆಯರ ಜೊತೆಗಿದ್ದೇವೆ ಎನ್ನುವುದನ್ನು ತೋರಿಸಿದ್ದೇವೆ. ಈ ವಿಷಯವನ್ನು ರಾಜಕೀಯ ಮಾಡಬೇಡಿ ಎಂದು ಈಗಾಗಲೆ ನೇಹಾ ತಂದೆ ನಿರಂಜನ ಹಿರೇಮಠ ಅವರು ಮನವಿ ಮಾಡಿದ್ದಾರೆ. ಎಲ್ಲ ಪಕ್ಷದವರೂ ತಮ್ಮ ಮನೆಗೆ ಬಂದು ಸಾಂತ್ವನ ಹೇಳಿದ್ದಾರೆ, ನ್ಯಾಯ ಕೊಡಿಸುವ ಭರವಸೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ. ಇಷ್ಟಾದರೂ ಬಿಜೆಪಿಯವರು ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ಚನ್ನರಾಜ ತಿಳಿಸಿದರು.

Emergency Service

ಸಾವಿನ ಮನೆಯಲ್ಲಿ ರಾಜಕೀಯ ಮಾಡುವ ಬಿಜೆಪಿಯ ಹಿಡನ್ ಅಜೆಂಡಾ ಯಶಸ್ವಿಯಾಗುವುದಿಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕುಟುಂಬಕ್ಕೆ ನ್ಯಾಯ ಸಿಗಬೇಕು. ಮುಂದೆ ಯಾರೂ ಇಂತಹ ಕೃತ್ಯಕ್ಕೆ ಇಳಿಯಬಾರದು ಎನ್ನುವುದು ನಮ್ಮ ಕಳಕಳಿ ಎಂದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಬೇಜವಾಬ್ದಾರಿಯುತ ಭಾಷಣ ಮಾಡುವುದನ್ನು ಬಿಟ್ಟು, ದೇಶದಲ್ಲಿ ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನು ತರಲಿ. ರಾಜ್ಯ ಸರಕಾರ ಕೈಗೊಂಡಂತೆ ವಿಶೇಷ ನ್ಯಾಯಾಲಯ ಸ್ಥಾಪನೆಯಂತಹ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಇಂತಹ ಕೃತ್ಯ ಯಾವ ಹೆಣ್ಣು ಮಗಳಿಗೂ ಆಗಬಾರದು. ಅಂತಹ ಶಿಕ್ಷೆ ಅಪರಾಧಿಗೆ ಆಗಬೇಕು. ಹಾಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. ಆದರೆ ಬಿಜೆಪಿಯವರನ್ನು ನೋಡಿದರೆ ಪಾಪ ಎನಿಸುತ್ತಿದೆ. ಚುನಾವಣೆಗೆ ಹೋಗಲು ಅವರ ಬಳಿ ವಿಷಯವಿಲ್ಲ. ಬರಗಾಲಕ್ಕೆ ಕೇಂದ್ರ ಪರಿಹಾರ ಕೊಡಲಿಲ್ಲ ಎಂದು ಜನರು ಅವರು ಹೋದಲ್ಲೆಲ್ಲ ಕೇಳುತ್ತಿದ್ದಾರೆ. ಹಾಗಾಗಿ ದಿಕ್ಕು ತೋಚದೆ ಹತಾಶ ಮನೋಭಾವದಿಂದ ಸಾವಿನ ಮನೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್‍ಯಾಲಿ ನಡೆಸಿ, ಮನವಿ ಸಲ್ಲಿಸಿದರು.

ಶಾಸಕರಾದ ರಾಜು ಸೇಠ್, ಬಾಬಾಸಾಹೇಬ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ನ್ಯಾಯವಾದಿ ಆರ್.ಪಿ.ಪಾಟೀಲ, ಜಯಶ್ರೀ ಮಾಳಗಿ, ಆಯೇಷಾ ಸನದಿ ಸೇರಿದಂತೆ ಹಲವಾರು ಮುಖಂಡರು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು.

Laxmi Tai add
Bottom Add3
Bottom Ad 2