Belagavi NewsBelgaum NewsKannada NewsKarnataka NewsNationalPolitics

*ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳಪೆ ಕಾಮಗಾರಿ: ನಿತಿನ್ ಗಡ್ಕರಿಗೆ ದೂರು ನೀಡಿದ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರು ಭೇಟಿ ಮಾಡಿ ಎನ್‌ಎಚ್-48ರ ಕಳಪೆ ಕಾಮಗಾರಿಯ ವಿರುದ್ಧ ಕೇಂದ್ರ ದೂರು ಸಲ್ಲಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ನಿಪ್ಪಾಣಿ ನಗರದ ಸಮೀಪ ಗಾಂಧಿ ಆಸ್ಪತ್ರೆ ಬಳಿ ರಾಷ್ಟ್ರೀಯ ಹೆದ್ದಾರಿ–48ರ ನೂತನ ಸೇತುವೆಯ ರಿಟೈನಿಂಗ್ ವಾಲ್ ಕುಸಿದ ಘಟನೆ ಅತ್ಯಂತ ಗಂಭೀರವಾಗಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಆತಂಕ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಮಾಜಿ ಸಂಸದರು ಹಾಗೂ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಭೇಟಿ ಮಾಡಿ, ಹೊನಗಾ–ಕೋಗನೋಳಿ ಹೆದ್ದಾರಿ ಕಾಮಗಾರಿಯಲ್ಲಿನ ಗುಣಮಟ್ಟದ ಕೊರತೆ,ನಿರ್ಲಕ್ಷ್ಯ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಉಂಟಾಗಿರುವ ಅಪಾಯದ ಕುರಿತು ಸವಿಸ್ತಾರವಾಗಿ ಮನವರಿಕೆ ಮಾಡಿದರು.

ಈ ವೇಳೆ ಗಡ್ಕರಿ ಅವರು ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಂಬಂಧಿತ ಗುತ್ತಿಗೆದಾರರೊಂದಿಗೆ ತಕ್ಷಣ ದೂರವಾಣಿ ಮೂಲಕ ಮಾತನಾಡಿ,ಕಳಪೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಗುತ್ತಿಗೆದಾರರಿಗೆ ಕಠಿಣ ಎಚ್ಚರಿಕೆ ನೀಡಿದರು.

ಭವಿಷ್ಯದಲ್ಲಿ ಇಂತಹ ಲೋಪಗಳು ಮರುಕಳಿಸಿದರೆ ಸಂಬಂಧಿತ ಗುತ್ತಿಗೆದಾರರನ್ನು ಮೂರು ವರ್ಷಗಳ ಕಾಲ ಕಪ್ಪುಪಟ್ಟಿಗೆ (Blacklist) ಸೇರಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಜೊತೆಗೆ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುಣಮಟ್ಟದ ಮೇಲೆ ವೈಯಕ್ತಿಕವಾಗಿ ನಿಗಾ ವಹಿಸಿ ನಿಯಮಿತ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ ಅವರು, ಸುರಕ್ಷಿತ, ಗುಣಮಟ್ಟದ ಮತ್ತು ಅಡೆತಡೆರಹಿತ ಸಂಚಾರ ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದರು ಹಾಗೂ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಅಣ್ಣಾಸಾಹೇಬ ಜೊಲ್ಲೆ ಮತ್ತು ಮಾಜಿ ಸಂಸದ ಉಮೇಶ್ ಜಾಧವ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button