Belagavi NewsBelgaum NewsKannada NewsKarnataka NewsPolitics

*ಕಬ್ಬು ಬೆಳೆಗಾರರಿಗೆ ಮತ್ತೆ ಎಫ್‌ಆರ್‌ಪಿ ಹೆಚ್ಚಳ ಸಾಧ್ಯತೆ: ಸಂಜಯ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಂಎಸ್‌ಪಿ ಮತ್ತು ಕಬ್ಬಿನ ಬೆಲೆ ನಿಗದಿ ಮಾಡುವ ಎಫ್‌ಆರ್‌ಪಿ ಎರಡೂ ವಿಭಿನ್ನವಾಗಿದ್ದು, ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಈ ವರ್ಷವೂ ಎಫ್‌ಆರ್‌ಪಿ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಬಿಜೆಪಿ ಮಾಜಿ ಶಾಸಕ ಹಾಗೂ ಬಿಜೆಪಿ ವಿಭಾಗ ಪ್ರಭಾರಿ ಸಂಜಯ ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ಬೆಲೆ ಕುಸಿತದಿಂದಾಗಿ ಕಾರ್ಖಾನೆಗಳು ಹಾಗೂ ರೈತರಿಗೆ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು 2018ರಲ್ಲಿ ಕೇಂದ್ರ ಸರ್ಕಾರ ಸಕ್ಕರೆಗೆ ಎಂಎಸ್‌ಪಿ ಜಾರಿಗೊಳಿಸಿತು. ಎಂಎಸ್‌ಪಿ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಗೆ ಸಂಬಂಧಿಸಿದ್ದರೆ, ಎಫ್‌ಆರ್‌ಪಿ ಕಬ್ಬಿನ ಬೆಲೆ ನಿಗದಿಗೆ ಅನ್ವಯಿಸುತ್ತದೆ ಎಂದು ವಿವರಿಸಿದರು.

ಪ್ರಸ್ತುತ ಸಕ್ಕರೆಯ ಎಂಎಸ್‌ಪಿ ಪ್ರತಿ ಕೆಜಿಗೆ ₹31 ಇದ್ದರೂ, ಕಳೆದ ಕೆಲವು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಇದಕ್ಕಿಂತ ಹೆಚ್ಚಿನ ದರದಲ್ಲೇ ಸಕ್ಕರೆ ಮಾರಾಟ ಮಾಡುತ್ತಿವೆ. ಕಳೆದ ವರ್ಷ ₹38–39 ಹಾಗೂ ಈ ವರ್ಷ ₹40ರಿಂದ ₹47ರವರೆಗೆ ಸಕ್ಕರೆ ಮಾರಾಟವಾಗಿದೆ ಎಂದು ಅವರು ತಿಳಿಸಿದರು.

ಅ.12ರಂದು ಸಭೆ ನಿರೀಕ್ಷೆ

ಕರ್ನಾಟಕದ ಕಬ್ಬು ಬೆಳೆಗಾರರ ಬೇಡಿಕೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಂದಿಸಿದ್ದು, ಈ ವರ್ಷವೂ ಎಫ್‌ಆರ್‌ಪಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಅಕ್ಟೋಬರ್ 12ರಂದು ಈ ಕುರಿತು ಸಭೆ ನಡೆಯುವ ನಿರೀಕ್ಷೆಯಿದ್ದು, ಕಬ್ಬು ಬೆಳೆಗಾರರಿಗೆ ಕೇಂದ್ರದಿಂದ ಸಿಹಿಸುದ್ದಿ ಸಿಗಲಿದೆ ಎಂದು ಸಂಜಯ ಪಾಟೀಲ್ ಹೇಳಿದರು.

ಕಬ್ಬು ಬೆಳೆಗಾರರ ಸಮಸ್ಯೆಗಳನ್ನು 

ಪರಿಹರಿಸಲು ರೈತ ಮುಖಂಡರು ದೆಹಲಿಗೆ ತೆರಳಿ ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ರೈತರ ಬೇಡಿಕೆಗಳನ್ನು ಆಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿರತೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 2014ಕ್ಕೂ ಮುನ್ನ ಬಾಕಿ ಉಳಿದಿದ್ದ ₹16,600 ಕೋಟಿ ಕಬ್ಬಿನ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗಿದ್ದು, ರೈತರಿಗೆ ಕಾರ್ಖಾನೆಗಳಿಂದ ನೇರವಾಗಿ ಹಣ ಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಸಂಜಯ ಪಾಟೀಲ್ ಹೇಳಿದರು.

2026ರ ಮೇ ತಿಂಗಳಲ್ಲಿ ಪ್ರತಿ ಕ್ವಿಂಟಾಲ್ ಕಬ್ಬಿಗೆ ಎಫ್‌ಆರ್‌ಪಿ ₹365ಕ್ಕೆ ಹೆಚ್ಚಿಸಲಾಗಿತ್ತು. ಈ ವರ್ಷವೂ ರೈತರ ಹಿತದೃಷ್ಟಿಯಿಂದ ಮತ್ತೊಮ್ಮೆ ಎಫ್‌ಆರ್‌ಪಿ ಹೆಚ್ಚಳ ಮಾಡುವ ನಿರೀಕ್ಷೆಯಿದೆ ಎಂದರು.

ಎಥೆನಾಲ್‌ ಉತ್ಪಾದನೆಗೆ ಉತ್ತೇಜನ

ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಎಥೆನಾಲ್‌ ಉತ್ಪಾದನೆ ಮತ್ತು ಖರೀದಿಗೆ ಉತ್ತೇಜನ ನೀಡುತ್ತಿದೆ. ಈ ಹಿಂದೆ 38 ಕೋಟಿ ಲೀಟರ್‌ನಷ್ಟಿದ್ದ ಎಥೆನಾಲ್‌ ಖರೀದಿ ಪ್ರಮಾಣ ಇದೀಗ 1200 ಕೋಟಿ ಲೀಟರ್‌ಗೆ ಏರಿಕೆಯಾಗಿದೆ ಎಂದು ಅವರು ಹೇಳಿದರು.

ಇದರಿಂದ ಕಬ್ಬು ಬೆಳೆಗಾರರಿಗೆ ಹಣ ಪಾವತಿಯಾಗುವ ಅವಧಿ ಕಡಿಮೆಯಾಗಿದೆ. ಕಳೆದ ವರ್ಷ ಶೇ.99.5ರಷ್ಟು ಹಣ ಪಾವತಿಯಾಗಿದ್ದರೆ, ಈ ವರ್ಷ ಈಗಾಗಲೇ ಶೇ.97ರಷ್ಟು ಪಾವತಿಯಾಗಿದೆ ಎಂದು ಸಂಜಯ ಪಾಟೀಲ್ ತಿಳಿಸಿದರು.

ರಾಜ್ಯ ಸರ್ಕಾರ ಎಸ್‌ಎಪಿ ಜಾರಿಗೊಳಿಸಲಿ

ಕಬ್ಬಿನ ಬೆಲೆ ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳಿಗೆ ಕಾನೂನಾತ್ಮಕ ಅವಕಾಶವಿದೆ. ಕೇಂದ್ರ ಸರ್ಕಾರ ಎಫ್‌ಆರ್‌ಪಿ ನಿಗದಿಪಡಿಸುವಂತೆ ಕರ್ನಾಟಕ ಸರ್ಕಾರವೂ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ನಿಗದಿಪಡಿಸಬೇಕು ಎಂದು ಸಂಜಯ ಪಾಟೀಲ್ ಒತ್ತಾಯಿಸಿದರು.

ಉತ್ತರ ಪ್ರದೇಶ, ಪಂಜಾಬ್‌, ಹರಿಯಾಣ ಹಾಗೂ ಉತ್ತರಾಖಂಡ ರಾಜ್ಯಗಳು ಎಸ್‌ಎಪಿ ನಿಗದಿಪಡಿಸಿವೆ. ಕರ್ನಾಟಕ ಸರ್ಕಾರವೂ ರೈತರ ಹಿತದೃಷ್ಟಿಯಿಂದ ಎಸ್‌ಎಪಿ ಜಾರಿಗೊಳಿಸಬೇಕು ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮೇಲಿನ ನೀರಿನ ಶುಲ್ಕವನ್ನು ₹5 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸಿರುವುದು ಕಾರ್ಖಾನೆಗಳಿಗೆ ಹೆಚ್ಚುವರಿ ಹೊರೆಯಾಗಿದೆ. ರೈತರ ಹಿತ ಕಾಪಾಡಲು ರಾಜ್ಯ ಸರ್ಕಾರ ಎಸ್‌ಎಪಿ ಜಾರಿಗೆ ಮುಂದಾಗಬೇಕು ಎಂದು ಸಂಜಯ ಪಾಟೀಲ್ ಆಗ್ರಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button