ರಾಜ್ಯಾದ್ಯಂತ ಶಾಲೆಗಳು ಬಂದ್ ಸಾಧ್ಯತೆ : ಶಿಕ್ಷಣ ಇಲಾಖೆಯಿಂದ ಆಗಲೇ ಸಿದ್ಧತೆ; ಎಲ್ಲ ಜಿಲ್ಲೆಗಳಿಗೆ ಸುತ್ತೋಲೆ ರವಾನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೋವಿಡ್ -19ರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲೆಗಳನ್ನು ಸ್ಥಗಿತಗೊಳಿಸಬೇಕಾದ ಸಂದರ್ಭ ಬರಬಹುದು ಎಂದು ಶಿಕ್ಷಣ ಅಧಿಕೃತವಾಗಿ ತಿಳಿಸಿದೆ.

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದ್ದು,  ಪರ್ಯಾಯ ಶಿಕ್ಷಣವನ್ನು ವಿದ್ಯಾಗಮ ಕಾರ್ಯಕ್ರಮದ ಮುಖೇನ ನಡೆಸಬೇಕೆಂದು ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ 17 ಪುಟಗಳ ವಿವರವಾದ ಸುತ್ತೋಲೆ ಹೊರಡಿಸಲಾಗಿದ್ದು, ಸಧ್ಯಕ್ಕೆ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಶಾಲೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿರುವುದನ್ನು ಉಲ್ಲೇಖಿಸಲಾಗಿದೆ.

`ಪ್ರಸ್ತುತ ಅನಿಶ್ಚಿತತೆಯ ಸನ್ನಿವೇಶವು ಮುಂದುವರಿದಲ್ಲಿ ರಾಜ್ಯಾದ್ಯಂತ ಶಾಲೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಂದರ್ಭಗಳು ಬಂದೊದಗಬಹುದಾಗಿದೆ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

”ರಾಜ್ಯದ ಸರಕಾರಿ, ಅನುದಾನ ಮತ್ತು ಅನುದಾನ ರಹಿತ ಶಾಲೆಗಳ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಕೋವಿಡ್ 19ರ ರೂಪಾಂತರಿ ಒಮಿಕ್ರಾನ್ ವೈರಾಣು ಹರಡುತ್ತಿರುವ ನಿಮಿತ್ತ ಭೌತಿಕ ತರಗತಿಗಳು ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಪರ್ಯಾಯ ಶಿಕ್ಷಣವನ್ನು ವಿದ್ಯಾಗಮ ಕಾರ್ಯಕ್ರಮದ ಮುಖೇನ ನಡೆಸುವ ಬಗ್ಗೆ” ಎಂದು ವಿಷಯದಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯಾರ್ಥಿಗಳ ಕಲಿಕಾ ನಿರಂತರತೆಯನ್ನು ಕಾಯ್ದುಕೊಳ್ಳಲು ಮತ್ತು ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಭೌತಿಕವಾಗಿ ತೊಡಗಿಸಲು ಸಾಧ್ಯವಾಗದೇ ಇರುವುದರಿಂದ ಪರ್ಯಾಯ ಮಾರ್ಗಗಳ ಮುಖೇನ ಕಲಿಕೆಯ  ನಿರಂತರತೆಯನ್ನು ಕಾಯ್ದುಕೊಳ್ಳಲು ವಿದ್ಯಾಗಮ ಯೋಜನೆಯನ್ನು ಜಾರಿಗೊಳಿಸಬೇಕಾಗಿದೆ ಎಂದು ತಿಳಿಸಿದೆ.

ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ೧ ರಿಂದ ೯ ನೇ ತರಗತಿವರೆಗೆ ಮೇಲ್ಕಂಡ ಸಲಹಾತ್ಮಕ ವೇಳಾಪಟ್ಟಿಯಂತೆ ವಿದ್ಯಾಗಮ ಕಾರ್ಯಕ್ರಮವನ್ನು ಪ್ರಾರಂಭಿಸಲು ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಲು ಸೂಚಿಸಿದೆ.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರಸ್ತುತ ಶಾಲೆಗಳಿಗೆ
ರಜೆ ಘೋಷಿಸಿರುವುದರಿಂದ ಮೇಲ್ಕಂಡ ವೇಳಾಪಟ್ಟಿಯಂತೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಂಡು
ಅದರಂತೆ ಕ್ರ ವಹಿಸುವುದು.
ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕೋವಿಡ್-೧೯ ರ ಹಿನ್ನೆಲೆಯಲ್ಲಿ ಸರ್ಕಾರ ಶಾಲೆಗಳಿಗೆ ರಜೆ ಘೋಷಿಸಿದ
ನಂತರದ ದಿನಾಂಕದಿಂದ ಅಗತ್ಯ ಪೂರ್ವಸಿದ್ಧತೆಗಳೊಂದಿಗೆ ಈ ಕಾರ್ಯಕ್ರಮನ್ನು ಅನುಷ್ಟಾನಗೊಳಿಸುವುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಈ ಸುತ್ತೋಲೆಯನ್ನು ರಾಜ್ಯದ ಎಲ್ಲ ಜಿಲ್ಲೆ, ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲ ಶಾಲೆಗಳ ಮುಖ್ಯಸ್ಥರಿಗೆ ರವಾನಿಸಲಾಗಿದೆ.

ಸಂಪೂರ್ಣ ಸುತ್ತೋಲೆಗೆ ಇಲ್ಲಿ ಕ್ಲಿಕ್ ಮಾಡಿ – VIDYAGAMA 2022 CIRCULAR 07 01 2022 4 30 PM PDF

 

ಶಾಲೆಗಳಿಗೆ ಹೊಸ ಗೈಡ್ ಲೈನ್ ಬಿಡುಗಡೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button