*ದಸರಾ ಉದ್ಘಾಟನೆ ತಿರಸ್ಕರಿಸಿದ ಗವಿಮಠ ಶ್ರೀ ಪೋಸ್ಟ್*: *ಟಿವಿ ಚಾನಲ್ ವಿರುದ್ಧ ಸುಮೋಟೋ ಕೇಸ್ ದಾಖಲು*

ಪ್ರಗತಿವಾಹಿನಿ ಸುದ್ದಿ: ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ದಸರಾ ಉದ್ಘಾಟನೆಗೆ ನಿರಾಕರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದ ಪೋಸ್ಟ್ವೊಂದು ವಿವಾದಕ್ಕೆ ಕಾರಣವಾಗಿದೆ. ಈ ಸುದ್ದಿ ಆಧಾರರಹಿತ ಮತ್ತು ಸುಳ್ಳು ಎಂದು ಆರೋಪಿಸಿ, ಈ ಸಂಬಂಧಿತ ಖಾಸಗಿ ಟಿವಿ ಚಾನಲ್ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ಖಾಸಗಿ ಸುದ್ದಿ ವಾಹಿನಿಯೊಂದರ ಹೆಸರಿನ ಅಪ್ಲಿಕೇಶನ್ನಲ್ಲಿ ಸ್ವಾಮೀಜಿಯವರು ದಸರಾ ಉದ್ಘಾಟನೆಗೆ ನಿರಾಕರಿಸಿದ್ದಾರೆ ಎಂಬ ಪೋಸ್ಟ್ ವೈರಲ್ ಆಗಿತ್ತು. ಇದರಿಂದ ಭಕ್ತರು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಕೊಪ್ಪಳ ನಗರ ಠಾಣೆ ಇನ್ಸ್ಪೆಕ್ಟರ್ ಸುರೇಶ್ ಡಿ. ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ನಡುವೆ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಗವಿಸಿದ್ದೇಶ್ವರ ಸ್ವಾಮೀಜಿಯವರು ದಸರಾ ಉದ್ಘಾಟನೆಗೆ ಸಂತೋಷದಿಂದ ಒಪ್ಪಿಗೆ ನೀಡಿದ್ದಾರೆ. ಶ್ರೀಗಳ ಒಪ್ಪಿಗೆ ಪಡೆದ ಬಳಿಕವೇ ಮುಖ್ಯಮಂತ್ರಿ ಅಧಿಕೃತವಾಗಿ ದಸರಾ ಉದ್ಘಾಟನೆ ಕುರಿತು ಘೋಷಣೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಶ್ರೀಗಳಿಗೆ ಶೀಘ್ರದಲ್ಲೇ ಅಧಿಕೃತ ಆಹ್ವಾನ ನೀಡಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ. ಪೂಜ್ಯರ ವಿಚಾರದಲ್ಲಿ ಯಾರೂ ಸುಳ್ಳು ಸುದ್ದಿ ಹರಡಬಾರದು. ಗವಿಸಿದ್ದೇಶ್ವರ ಸ್ವಾಮೀಜಿಯವರು ದಸರಾ ಉದ್ಘಾಟಿಸುತ್ತಿರುವುದು ಕೊಪ್ಪಳ ಭಾಗದ ಜನರಿಗೆ ಹೆಮ್ಮೆಯ ಸಂಗತಿ ಎಂದು ಅವರು ತಿಳಿಸಿದ್ದಾರೆ.
ಸುಳ್ಳು ಸುದ್ದಿ ಹರಡಿದ ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಸ್ಟ್ನ ಮೂಲ, ಅದರ ಹಿಂದೆ ಇರುವವರು ಹಾಗೂ ಮಾಹಿತಿ ಹರಡಿದ ರೀತಿಯ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




