ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ದರ ಹೆಚ್ಚಳ: ಚೇಂಬರ್ ಆಫ್ ಕಾಮರ್ಸ್ ನಿಂದ ಹೋರಾಟ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ದರ ಹೆಚ್ಚಿಸಿರುವ ಸರಕಾರ ತನ್ನ ನಿರ್ಧಾರವನ್ನು ಏಳು ದಿನಗಳ ಒಳಗೆ ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಚೇಂಬರ್ ಆಫ್ ಕಾಮಸ್೯ ಅಧ್ಯಕ್ಷ ಹೇಮೇಂದ್ರ ಪೋರವಾಲ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯ ಸರಕಾರ ತನ್ನ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ‘ಗೃಹ ಜ್ಯೋತಿ’ ಹೆಸರಿನಲ್ಲಿ ಎಲ್ಲ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡುತ್ತಿದೆ. ಆದರೆ ಕೈಗಾರಿಕಾ ಪ್ರದೇಶದ ವಿದ್ಯುತ್ ಬಿಲ್ ಹೆಚ್ಚಳ ಮಾಡಿರುವುದು ಸರಿಯಾದ ಕ್ರಮವಲ್ಲ” ಎಂದರು.
“ಬೆಳಗಾವಿಯಲ್ಲಿ ಸಣ್ಣ ಕೈಗಾರಿಕೆಗಳು ಬಹಳಷ್ಟಿವೆ. ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗುತ್ತಿದೆ. ಈಗಾಗಲೇ ಬೆಳಗಾವಿ ಕೈಗಾರಿಕಾ ಕಂಪನಿಯಿಂದ ಸಾಕಷ್ಟು ತೆರಿಗೆ ತುಂಬುತ್ತಿದ್ದೇವೆ. ವಿದ್ಯುತ್ ಬಿಲ್ ಹೆಚ್ಚಳ ಮಾಡಿದರೆ ಇಲ್ಲಿನ ಕೈಗಾರಿಕೆಗಳು ಮುಚ್ಚುವ ಹಂತ ತಲುಪಲಿವೆ, ಇಲ್ಲವೆ ನೆರೆಯ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸರಕಾರ ನಮ್ಮ ಸಮಸ್ಯೆಯನ್ನು ಬಗೆ ಹರಿಸದಿದ್ದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ” ಎಂದು ಎಚ್ಚರಿಸಿದರು.
“ಕೈಗಾರಿಕಾ ಪ್ರದೇಶದಲ್ಲಿನ ವಿದ್ಯುತ್ ಬಿಲ್ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಇದಕ್ಕೂ ಸರಕಾರ ಬಗ್ಗದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲು ಕರೆ ನೀಡಲಾಗುವುದು” ಎಂದರು.
ರೋಹನ್ ಜುವಳಿ, ಡಾ. ರಾಜಶೇಖರ ಆನಂದ ದೇಸಾಯಿ, ರಾಮ ಭಂಡಾರಿ, ಮಹಾದೇವ ಚೌಗುಲೆ, ದಯಾನಂದ ನೇತಲಕರ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ