ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶಕ್ತಿಯುತ ದೇಹ ಹಾಗೂ ಮನಸ್ಸು ಆರೋಗ್ಯಕರ ಜೀವನಕ್ಕೆ ಸಹಕಾರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ವಿಶ್ವ ಹೃದಯ ದಿನಾಚರಣೆ ಅಂಗವಾಗಿ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ಇಂದು ಆಯೋಜಿಸಿದ್ದ *ಹೃದಯದಿಂದ ಬಾಂಧವ್ಯ ಬೆಳೆಸೋಣ* : ವಾಕಥಾನ್ ಗೆ ಅವರು ಚಾಲನೆ ನೀಡಿ ಮಾತನಾಡಿದರು.
ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಹೃದಯ ಸ್ನೇಹಿ ಚಟುವಟಿಕೆಯಾದ ಬಿರುಸಿನ ನಡಿಗೆಗೆ ಚಾಲನೆ ನೀಡಲಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ಬಿರುಸಿನ ನಡಿಗೆ ಸಹಾಯಕ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹೃದಯ ಮನುಷ್ಯನ ಅಂಗಗಳ ಪೈಕಿ ಅತ್ಯಂತ ಪ್ರಮುಖ ಅಂಗ ಎಂದ ಅವರು ಹೃದಯಾಘಾತ ಆದಾಗ ಪ್ರಾಥಮಿಕ ಚಿಕಿತ್ಸೆ ಕುರಿತಂತೆ ಮಾಹಿತಿ ಪ್ರತಿಯೊಬ್ಬರಿಗೂ ಅತ್ಯಗತ್ಯ ಎಂದರು.
ಶೇ 60 ರಷ್ಟು ಸಂಭವಿಸುವ ಅಕಾಲಿಕ ಮರಣಗಳಲ್ಲಿ ಶೇ 25 ರಷ್ಟು ಸಾವುಗಳು ಹೃದಯರೋಗದಿಂದ ಸಂಭವಿಸುತ್ತಿದೆ. ಇದನ್ನು ತಡೆಗಟ್ಟಲು ಬಿರುಸಿನ ನಡಿಗೆ ಅತ್ಯುತ್ತಮ ವ್ಯಾಯಾಮವಾಗಿದೆ. ರಾಜ್ಯದ ಜನತೆ ಪ್ರತಿದಿನ ಶ್ರಮಜೀವನಕ್ಕೆ ಬದ್ಧರಾಗಿರಬೇಕು. ಕನಿಷ್ಠ ಅರ್ಧ ಗಂಟೆಯಾದರೂ ಬಿರುಸಿನ ನಡಿಗೆ ಮಾಡಬೇಕು ಎಂದು ಸಲಹೆ ನೀಡಿದರು.
ಬಿರುಸಿನ ನಡಿಗೆಗೆ ಸ್ಫೂರ್ತಿ ತುಂಬಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದಿನಿಂದ ನಿಯಮಿತವಾಗಿ ವಾಕಿಂಗ್ ಮಾಡುವ ಪ್ರತಿಜ್ಞೆಯನ್ನು ಮುಖ್ಯಮಂತ್ರಿಗಳು ಕೈಗೊಂಡರು. . ವ್ಯಕ್ತಿ ಹಾಗೂ ಸಮುದಾಯದ ಆರೋಗ್ಯ ಬಹಳ ಮುಖ್ಯ. ಹೃದಯ ಸದಾ ಬಡಿಯುವ ಅಂಗ ಇದನ್ನು ಆರೋಗ್ಯಕರವಾಗಿಡುವ ಮೂಲಕ ಆರೋಗ್ಯವಂತ ರಾಜ್ಯವನ್ನು ಕಟ್ಟೋಣ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಆರೋಗ್ಯ ಸಚಿವ ಡಾ: ಕೆ.ಸುಧಾಕರ್,ಸಂಸದ ಪಿ.ಸಿ ಮೋಹನ್, ಜಿಲ್ಲಾಧಿಕಾರಿ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ