ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು ಕಲ್ಯಾಣಕರ್ನಾಟಕ ಸಾರಿಗೆ ನಿಗಮವೆಂದು ರಾಜ್ಯ ಸರ್ಕಾರವು ಮರು ನಾಮಕರಣ ಮಾಡಿ ಆದೇಶ ಹೊರಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಹರ್ಷವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತ, ಹೈದ್ರಾಬಾದ್-ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕವೆಂದು ಮರುನಾಮಕರಣವಾದ ಮೇಲೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆಯ ಹೆಸರನ್ನು ಬದಲಾಯಿಸಿ ಕಲ್ಯಾಣಕರ್ನಾಟಕ ಸಾರಿಗೆ ನಿಗಮವೆಂದು ಮರುನಾಮಕರಣ ಮಾಡಿರುವುದು ಅತ್ಯಂತ ಸೂಕ್ತವೆನಿಸಿದೆ. ಈ ಭಾಗದ ಜನತೆಯ ಬಹುದಿನಗಳ ಕನಸು ನನಸಾಗಿದೆ. ಕ್ರಮ ಕೈಗೊಂಡು ಆದೇಶವನ್ನು ಹೊರಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹಾಗೂ ಸಾರಿಗೆ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾಗಿರುವ ಲಕ್ಷ್ಮಣ ಸವದಿಯವರಿಗೆ ವೈಯಕ್ತಿಕವಾಗಿ ಹಾಗೂ ನಾಡಿನ ಜನತೆಯ ಪರವಾಗಿ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬದಲಾಗಿ (ಮುಂಬಯಿ-ಕರ್ನಾಟಕ) ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂದು ನಾಮಕರಣಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ವಾಯವ್ಯ ಕರ್ನಾಟಕದ ಬದಲಾಗಿ ಕಿತ್ತೂರು ಕರ್ನಾಟಕವೆಂದು ನಾಮಕರಣಗೊಳ್ಳಬೇಕೆಂಬುದು ಈ ಭಾಗದ (ಉತ್ತರಕರ್ನಾಟಕ) ಜನತೆಯ ಬಹುದಿನಗಳ ಬೇಡಿಕೆಯಾಗಿದೆ. ಈ ಕುರಿತು ಶೀಘ್ರವಾಗಿ ಕ್ರಮಕೈಗೊಳ್ಳುವ ಮೂಲಕ ಸರ್ಕಾರವು ಈ ಭಾಗದ ಜನರ ಕನಸ್ಸನ್ನು ಸಾಕಾರಗೊಳಿಸಬೇಕೆಂದು ವಿನಂತಿಸಿದ್ದಾರೆ.
ಕುಲಗೋಡ ಪಿಎಚ್‍ಸಿ ದುರಸ್ತಿಗೆ ಕ್ರಮ: ಶಾಸಕ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ