Belagavi NewsBelgaum NewsKannada NewsKarnataka News

*ಒಬ್ಬ ವ್ಯಕ್ತಿ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಸಾಕ್ಷಿಪ್ರಜ್ಞೆಯಾಗಿ ನಿಂತಿದ್ದಾರೆ ಡಾ.ಪ್ರಭಾಕರ ಕೋರೆ – ತ್ಯಾಗರಾಜ್* ; *40 ವರ್ಷಗಳ ಸಾರ್ಥಕ ಸೇವೆ ; ಅಭಿನಂದನಾ ಸಮಾರಂಭ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕವಯಸ್ಸಿನಲ್ಲಿಯೇ ಆಕಸ್ಮಿಕವಾಗಿ ಕೆಎಲ್‍ಇ ಸಂಸ್ಥೆಯ ಚೇರಮನ್‍ನಾಗಿ ಆಯ್ಕೆಯಾದೆ. ಹಲವಾರು ಸವಾಲುಗಳನ್ನು ಎದುರಿಸಿದೆ. ಎಲ್ಲರೂ ಸಹಕಾರ ನೀಡಿದರು. ಸಂಸ್ಥೆ ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು 40 ವಿಸ್ತರಿಸಿದೆ ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು.


ಅವರು ಬೆಳಗಾವಿ ಕನ್ನಡ ಭವನದಲ್ಲಿ ಕೆಎಲ್‍ಇ ಸಂಸ್ಥೆಯ ನಿವೃತ್ತ ಆಜೀವ ಸದಸ್ಯರು, ಪ್ರಾಚಾರ್ಯರು, ಪ್ರಾಧ್ಯಾಪಕರು, ಅಧ್ಯಾಪಕರು, ಸಿಬ್ಬಂದಿ, ಬೆಳಗಾವಿಯ ಸಂಘಸಂಸ್ಥೆಗಳು, ಕನ್ನಡ ಭವನ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಆಪ್ತಮಿತ್ರರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದರು.


ಬೃಹತ್ ಕೆಎಲ್‍ಇ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವುದೇ ಒಂದು ಭಾಗ್ಯ. ಅದು ನನ್ನದಾದುದು ಒಂದು ಆಕಸ್ಮಿಕ. ಅದನ್ನು ಅತ್ಯಂಥ ಸಮರ್ಥವಾಗಿ ನಿಭಾಯಿಸಿದೆ. ಪುಟ್ಟ ಗ್ರಾಮೀಣ ಪ್ರದೇಶದಿಂದ ಬಂದ ನನಗೆ ಎಲ್ಲರೂ ಕಾಲಕಾಲಕ್ಕೆ ಸಹಕಾರ ನೀಡಿದರು. ಮಾರ್ಗದರ್ಶಿಸಿದರು. ಇಂದು ಕೆಎಲ್‍ಇ ಒಂದು ನಾಮಾಂಕಿತ ಸಂಸ್ಥೆಯಾಗಿ ಬೆಳೆದುನಿಂತಿದೆ. ಕರ್ನಾಟಕ ಜನತೆಗೆ ಉತ್ತಮವಾದ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ನೀಡಬೇಕೆಂಬುದು ನನ್ನ ಹೆಬ್ಬಯಕೆಯಾಗಿತ್ತು. ಅದನ್ನು ಈಡೇರಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಹಿರಿಯ ರಾಜಕೀಯ ಧುರಣೀರಾಗಿದ್ದ ಎಸ್. ನಿಜಲಿಂಗಪ್ಪನವರು ಮೊದಲ್ಗೊಂಡು ಎಲ್ಲರೂ ನನಗೆ ಆಶೀರ್ವದಿಸಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ನನ್ನ ಶ್ರೀಮತಿ ಆಶಾ ಅವರು ಕೌಟುಂಬಿಕ ಎಲ್ಲ ಜವಾಬ್ದಾರಿಗಳನ್ನು ಹೊತ್ತು ನನ್ನ ಸಮಾಜ ಕೆಲಸಕ್ಕೆ ಅನುವು ಮಾಡಿಕೊಟ್ಟರು ಅದರ ಫಲವೆಂಬಂತೆ ನಾನು ಅಸಂಖ್ಯ ಕೆಲಸಗಳನ್ನು ಮಾಡಲು ಸಾಧ್ಯವಾಯಿತು ಎಂದರು. ಮುಂಬರುವ ಎರಡು ತಿಂಗಳಲ್ಲಿ ಕೆಎಲ್‍ಇ ಸಂಸ್ಥೆಯ 300 ಹಾಸಿಗೆಗಳ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆಯು ಲೋಕಾರ್ಪಣೆಗೊಳ್ಳಲಿದೆ. ಇದು ದೇಶದ ಅತ್ಯಾಧುನಿಕ, ಎಲ್ಲ ಸೌಕರ್ಯಗಳನ್ನು, ಉಪಕರಣಗಳನ್ನು ಹೊಂದಿರುವ ಆಸ್ಪತ್ರೆ ಎನಿಸಿಕೊಳ್ಳಲಿದೆ. ಆರೋಗ್ಯ ನೆಲೆಯಲ್ಲಿ ಸಂಸ್ಥೆಯು ಇನ್ನಷ್ಟು ಮಹತ್ವದ ಹೆಜ್ಜೆಗಳನ್ನು ಇಡಲಿದೆ. ಇದಕ್ಕೆ ನಿಮ್ಮೆಲ್ಲರ ಶುಭಹಾರೈಕೆ ಬೇಕು ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ರಾಣಿ ಚೆನ್ನಮ್ಮ ವಿವಿ ಕುಲಪತಿಗಳಾದ ಡಾ.ಸಿ.ಎಂ.ತ್ಯಾಗರಾಜ ವಹಿಸಿ ಮಾತನಾಡುತ್ತ, ಡಾ.ಪ್ರಭಾಕರ ಕೋರೆಯವರು ತಮ್ಮ ಹೆಸರಿಗೆ ಅನ್ವರ್ಥರಾದವರು. ಒಂದು ಸಂಸ್ಥೆಯನ್ನು ಮಾತ್ರ ಕಟ್ಟಲಿಲ್ಲ ಅದನ್ನು ಗುಣಾತ್ಮಕವಾಗಿ ಬೆಳೆಸಿದರು, ವಿಸ್ತರಿಸಿದರು. ಇಂದು ಕೆಎಲ್‍ಇ ಸಂಸ್ಥೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಓದುತ್ತಿದ್ದಾರೆ. ಸಾವಿರಾರು ಕುಟುಂಬಗಳು ಉತ್ತಮವಾದ ಜೀವನವನ್ನು ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ಏನೆಲ್ಲವನ್ನು ಮಾಡಲು ಸಾಧ್ಯವೆಂಬುದಕ್ಕೆ ಡಾ.ಕೋರೆಯವರು ಸಾಕ್ಷಿಪ್ರಜ್ಞೆಯಾಗಿ ನಮ್ಮ ಮುಂದೆ ನಿಂತಿದ್ದಾರೆ ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿಯ ನಿವೃತ್ತ ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ ಮಾತನಾಡುತ್ತ, ಕೋರೆಯವರ ಸಾರ್ವಜನಿಕ ಸಂಬಂಧ ಕಲ್ಪನೆಗೂ ನಿಲುಕದ್ದು. ಎಲ್ಲರ ಜೊತೆ ಉತ್ತಮ ಸಂಬಂಧ ಹೊಂದಿ, ಸಮಾಜಕ್ಕೆ ಮತ್ತು ಕೆಎಲ್ಇ ಸಂಸ್ಥೆಗೆ ಏನೆಲ್ಲ ಮಾಡಬಹುದೋ ಮಾಡಿದ್ದಾರೆ. ಅವರ ನಿಸ್ವಾರ್ಥ ಸೇವೆ ಇಡೀ ವಿಶ್ವಕ್ಕೇ ಮಾದರಿ ಎಂದು ಹೇಳಿದರು.

ಡಾ.ಕೋರೆಯವರ ಇಚ್ಛಾಶಕ್ತಿ ಅಪಾರವಾದುದು. ಅವರು ಸಂಸ್ಥೆಯ ಆಚೆಗೂ ಮೌಲಿಕವಾದ ಕೊಡುಗೆಯನ್ನು ನೀಡಿದರು. ಪ್ರಾಥಃಸ್ಮರಣೀಯರನ್ನು ಸ್ಮರಿಸಿದರು. ನಮ್ಮ ಸಮಾಜದ ಅಸ್ಮಿತೆಯಾಗಿ, ಸಾಂಸ್ಕøತಿಕ ರಾಯಬಾರಿಯಾಗಿ ಅವರು ನೀಡಿರುವ ಕೊಡುಗೆಗಳು ಅಸಂಖ್ಯ. ಅವರ ಸೇವೆಗೆ ಶಬ್ದ ನಿಲುಕದು. ಸಮಾಜ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು ಎಂದು ಹಿರೇಮಠ ಹೇಳಿದರು.

ಇದೇ ಸಂದರ್ಭದಲ್ಲಿ ಯುಎಸ್‍ಎಂ-ಕೆಎಲ್‍ಇ ನಿರ್ದೇಶಕರಾದ ಡಾ.ಎಚ್.ಬಿ.ರಾಜಶೇಖರ, ಬೆಳಗಾಮ್ ಎಜ್ಯುಕೇಶನ್ ಸೊಸೈಟಿ ಚೇರಮನ್ ಅವಿನಾಶ ಪೋತದಾರ, ಖ್ಯಾತ ಸಾಹಿತಿಗಳಾದ ಡಾ.ವಿ.ಎಸ್.ಮಾಳಿ, ಡಾ.ಬಸವರಾಜ ಜಗಜಂಪಿ, ಡಾ.ಗುರುದೇವಿ ಹುಲೆಪ್ಪನವರಮಠ, ಕೆಎಲ್‍ಇ ನಿವೃತ್ತ ಜಂಟಿ ಕಾರ್ಯದರ್ಶಿ ಡಾ.ವಿ.ಬಿ.ಹಿರೇಮಠ, ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಅಧ್ಯಕ್ಷರಾದ ಎಸ್.ವೈ.ಕುಂದರಗಿ ಅಭಿನಂದನ ನುಡಿಗಳನ್ನಾಡಿಗಳನ್ನಾಡಿದರು. ಪ್ರಿ.ಬಿ.ಎಸ್.ಗವಿಮಠ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.


ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆಯವರ ‘ಶಿಖರ ಸೂರ್ಯ’ ಅಭಿನಂದನ ಗ್ರಂಥ ಸಂಪಾದಿಸಿದ ಡಾ.ಅಶೋಕ ನರೋಡೆಯವರನ್ನು, ಡಾ.ಪ್ರಭಾಕರ ಕೋರೆ ಭಾವಚಿತ್ರ ಬಿಡಿಸಿದ ಚಿತ್ರಕಲಾವಿದ ಬಾಳು ಸದಲಗೆ ಅವರನ್ನು ಡಾ.ಪ್ರಭಾಕರ ಕೋರೆಯವರು ಸತ್ಕರಿಸಿದರು. ಆಶಾ ಕೋರೆ, ಮಹಾಂತೇಶ ಕವಟಗಿಮಠ, ಡಾ.ವಿಶ್ವನಾಥ ಪಾಟೀಲ, ಜಯಾನಂದ ಮುನವಳ್ಳಿ, ಡಾ. ಎಫ್.ವ್ಹಿ.ಮಾನ್ವಿ, ಪ್ರೊ.ಎಸ್.ಎಸ್.ಉರಬಿನವರ, ಜಾವೂರ, ಸುಭಾಷ ಏಣಗಿ, ಪ್ರೊ. ವಿ.ಜಿ. ಅಷ್ಟಗಿ, ಪ್ರೊ.ಸಾಲಿಮಠ, ಪ್ರೊ ಎಸ್.ವಿ. ದಳವಾಯಿ, ಪ್ರೊ.ಎ.ಪಿ.ಬಿರಾದಾರ ಪಾಟೀಲ, ಡಾ.ಎಂ.ಟಿ.ಕುರಣಿ ಮೊದಲಾದವರು ಉಪಸ್ಥಿತರಿದ್ದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಯ.ರು.ಪಾಟೀಲ ವಂದಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button