ಜಾನುವಾರಗಳ ಚಿಕಿತ್ಸೆ ನಿರ್ಲಕ್ಷಿಸಿದರೆ ವೈದ್ಯರ ವಿರುದ್ಧ ಕ್ರಮ: ಸಚಿವ ಪ್ರಭು ಚವ್ಹಾಣ್ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗೋರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿರುವ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ರಾಜ್ಯಮಟ್ಟದಲ್ಲಿ ವಾರ್ ರೂಮ್ ಕೂಡ ಪ್ರಾರಂಭ ಮಾಡಲಾಗಿದ್ದು, ಪಶುಗಳು ಕಾಯಿಲೆಬಿದ್ದಲ್ಲಿ ರೈತರು ವಾರ್ ರೂಮ್ ಗೆ ಕರೆ ಮಾಡಿ ಮಾಹಿತಿ ನೀಡಿದರೆ ಸಂಬಂಧಿಸಿದ ಪಶುವೈದ್ಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡಲಿದ್ದಾರೆ ಎಂದು ಪಶುಸಂಗೋಪನೆ ಇಲಾಖೆಯ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಸು ಮುಂತಾದ ಪ್ರಾಣಿಗಳ ರಕ್ಷಣೆಗಳಿಗೆ ಸರ್ಕಾರದ ವತಿಯಿಂದ ಪ್ರತೀ ಜಿಲ್ಲೆಗಳಲ್ಲಿ ಅಂಬುಲೆನ್ಸ್ ಈಗಾಗಲೇ ನೀಡಲಾಗಿದೆ. ಜಾನುವಾರುಗಳ ಚಿಕಿತ್ಸೆ ನಿರ್ಲಕ್ಷಿಸಿದರೆ ಪಶುವೈದ್ಯರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕೊರೊನಾ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳು ರೈತರ ಹಸು ಎಮ್ಮೆ, ಆಡು, ಕುರಿಗಳ ರಕ್ಷಣೆಗೆ ಹೆಚ್ಚು ಒತ್ತು ನೀಡುವ ಮೂಲಕ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶೀಘ್ರವಾಗಿ ಇಲಾಖೆಯಲ್ಲಿ 18000 ಹುದ್ದೆಗಳ ನೇಮಕಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ಅಥಣಿ ತಾಲೂಕಿನಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ತಾಲೂಕು ಮಟ್ಟದಲ್ಲಿ ಪ್ರತಿಯೊಬ್ಬ ಪಶು ಅಧಿಕಾರಿಯು ರೈತರ ಜೊತೆ ಸಂಪರ್ಕದಲ್ಲಿರಬೇಕು. ಅದೇ ರೀತಿ ಕ್ಯಾಂಪ್ ಗಳನ್ನು ಕೈಗೊಳ್ಳುವ ಮೂಲಕ ಪ್ರಾಣಿಗಳ ಆರೋಗ್ಯ ತಪಾಸಣೆ ಕೈಗೊಳಬೇಕು ಎಂದು ಸಚಿವ ಪ್ರಭು ಚವಾಣ ನಿರ್ದೇಶನ ನೀಡಿದರು.
ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕರಾದ ಅಶೋಕ ಕೊಳ್ಳ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಮತ್ತು ವಕ್ಪ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಪರಿಶೀಲನೆ:
ಬೆಳಗಾವಿಯ ಮಹಾಂತೇಶ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಪಶುಸಂಗೋಪನೆ ಇಲಾಖೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಇಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂದಾಜು ರೂ. 1.25 ಕೋಟಿ ವೆಚ್ಚದಲ್ಲಿ ಕಟ್ಟಡ ಹಾಗೂ ಪಶು ವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರ ನಿರ್ಮಿಸಲಾಗುತ್ತಿದೆ. ಕಟ್ಟಡದ ಕಾಮಗಾರಿಯಲ್ಲಿ ಲೋಪಗಳಾಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ