Kannada NewsLatest

ಪಶುಸಂಗೋಪನೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ: ಸಚಿವ ಪ್ರಭು ಚವ್ಹಾಣ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಶುಸಂಗೋಪನೆ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಗಳ ಹುದ್ದೆ ಭರ್ತಿಗೆ ಅನುವತಿ ದೊರೆತಿದ್ದು ಸದ್ಯದಲ್ಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

ಪಶುಸಂಗೋಪನೆ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಹುದ್ದೆಗಳು ಖಾಲಿ ಇದ್ದಿದ್ದರಿಂದ ಸಮರ್ಪಕವಾಗಿ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿತ್ತು. ಗೋಹತ್ಯೆ ನಿಷೇಧ ಕಾಯ್ದೆ ಜಿಲ್ಲೆಗೊಂದು ಗೋಶಾಲೆ ಪ್ರಾಣಿ ಕಲ್ಯಾಣ ಸಹಾಯವಾಣಿ ಸೇರಿದಂತೆ ಇತ್ತೀಚೆಗೆ ಪರಿಚಯಿಸಿದ ಇಲಾಖೆಯ ಯೋಜನೆಗಳು ಸಿಬ್ಬಂದಿಗಳ ಕೊರತೆಯಿಂದ ಹಿನ್ನಡೆ ಆಗುತ್ತಿತ್ತು. ಪ್ರತಿಬಾರಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ಕೊರತೆ ನೀಗಿಸಲು ಮನವಿ ಮಾಡಿಕೊಳ್ಳುತ್ತಿದ್ದರು. ಅಲ್ಲದೆ ಅಧಿವೇಶನದ ಸಂದರ್ಭದಲ್ಲಿ ವಿಧಾನಪರಿಷತ್ ಹಾಗೂ ವಿಧಾನಸಭೆಯಲ್ಲಿ ಸದಸ್ಯರುಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಸಿಬ್ಬಂದಿಗಳ ಕೊರತೆ ಕುರಿತು ಪ್ರಶ್ನೆ ಹಾಕುವುದು ವಾಡಿಕೆಯಾಗಿತ್ತು.

ಕಳೆದ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ನೇಮಕಾತಿ ಕುರಿತು ಚರ್ಚೆ ನಡೆಸಿದ್ದೆ. ಅಲ್ಲದೆ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪಶುಸಂಗೋಪನೆ ಇಲಾಖೆಗೆ ನೇಮಕಾತಿಯಲ್ಲಿ ಇರುವ ತೊಡಕುಗಳ ಕುರಿತು ಮಾತುಕತೆ ನಡೆಸಿದ್ದೆ. ಸಿಎಂ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ಬಳಿಕವೂ ಈ ವಿಚಾರ ಗಮನಕ್ಕೆ ತಂದಿದ್ದೆ. ಈಗ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಅನುಮತಿ ದೊರೆತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಧನ್ಯವಾದಗಳು ಎಂದರು.

ಪಶುಸಂಗೋಪನೆ ಇಲಾಖೆಯಲ್ಲಿ ಗುರುತರ ಬದಲಾವಣೆ ತರುವ ಸಲುವಾಗಿ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದಾಗ ಅಲ್ಲಿನ ಅಭಿವೃದ್ಧಿ ಮಾದರಿಗಳನ್ನು ನಮ್ಮಲ್ಲಿಯೂ ಸಹ ಅಳವಡಿಸಿಕೊಳ್ಳಲು ಆಲೋಚಿಸಿದಾಗ ನಮ್ಮಲ್ಲಿನ ಸಿಬ್ಬಂದಿ ಕೊರತೆಯಿಂದ ಪ್ರತಿಬಾರಿ ಸಮಸ್ಯೆ ಎದುರಾಗುತ್ತಿತ್ತು.

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಯಿಂದಾಗಿ ಇಲಾಖೆಯ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ವೇಗ ದೊರೆಯಲಿದ್ದು ಪಶುಸಂಗೋಪನೆ ಇಲಾಖೆ ಮತ್ತಷ್ಟು ಚುರುಕಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ ಹರ್ಭಜನ್ ಸಿಂಗ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button