Reporter wanted
Crease wise New Design

ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮ

ಜಿಡಗಾದಲ್ಲಿ ಶಾಸಕರು, ಸಂಸದರು, ಸಚಿವರು ಮತ್ತು ರಾಜಕೀಯ ಮುಖಂಡರು, ಭಕ್ತರು ಭಾಗಿ

ಸಿ.ಎಸ್. ಹಿರೇಮಠ, ಮುಗಳಖೋಡ/ಜಿಡಗಾ : ಮುಗಳಖೋಡ-ಜಿಡಗಾ ಸುಕ್ಷೇತ್ರದ ಅಧಿಪತಿಗಳಾದ ಶ್ರೀ ಷಡಕ್ಷರಿ ಶಿವಯೋಗಿ ಮಹಾಸ್ವಾಮಿಗಳವರು ಆಳಂದ ತಾಲೂಕಿನ ಜಮಗಾ (ಜೆ) ಗ್ರಾಮದಲ್ಲಿ ದಿನಾಂಕ : ೦೨.೧೨.೧೯೮೫ ರಂದು ಜನಿಸಿದರು. ಇವರ ತಂದೆ ಚೆನ್ನವೀರಯ್ಯಸ್ವಾಮಿ ತಾಯಿ ಸುನಂದಾದೇವಿ. ಬೆಳೆವಸಿರಿ ಮೊಳಕೆಯಲ್ಲಿ ಕಾಣು ಎಂಬ ನುಡಿಗೆ ಭಾಷ್ಯ ಬರೆದಂತೆ ಬೆಳೆದು ಬಂದವರು. ಶ್ರೀ ಷ. ಶಿ. ಸಿದ್ಧರಾಮೇಶ್ವರ ಮಹಾಸ್ವಾಮಿಗಳವರ ಕೃಪೆಗೆ ಪಾತ್ರರಾದವರು. ಇವರು ಮುಗಳಖೋಡ-ಜಿಡಗಾ ಮಠಗಳ ಉತ್ತರಾಧಿಕಾರಿಯಾಗಿ ದಿನಾಂಕ ೧೫.೦೨.೨೦೦೫ ರಂದು ಆಯ್ಕೆಗೊಂಡರು.
ಮುಗಳಖೋಡ ಬೃಹನ್ಮಠ ಹಾಗೂ ಜಿಡಗಾದ ನವಕಲ್ಯಾಣ ಮಠಗಳ ಅಡಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಗೋವಾ ಹಾಗೂ ಸೀಮಾಂದ್ರ ರಾಜ್ಯಗಳಲ್ಲಿ ೩೬೫ ಶಾಖಾ ಮಠಗಳಿದ್ದು ಇವೆಲ್ಲವೂ ಧಾರ್ಮಿಕ ಸಾಮರಸ್ಯದ ಪ್ರತೀಕದಂತಿದ್ದು, ಎಲ್ಲ ಧರ್ಮಗಳ ಭಕ್ತರ ಪುಣ್ಯ ತಾಣವೆನಿಸಿವೆ. ಈ ಮಠಗಳಿಗೆ ಎಲ್ಲಾ ಧರ್ಮಗಳ ಭಕ್ತರು ಬರುವುದುಂಟು, ಇಲ್ಲಿ ನಿರಂತರ ಅನ್ನದಾಸೋಹ, ಜ್ಞಾನ ದಾಸೋಹ ನಡೆದು ಬಂದಿದೆ. ಈ ಮಠಗಳು ಕಳೆದ ಐದಾರು ದಶಕಗಳಿಂದ ಸಮಾಜದಲ್ಲಿ ಶೋಷಿತ ಹಾಗೂ ದುರ್ಬಲ ವರ್ಗದ ಜನರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತ ಬಂದಿವೆ. ಶ್ರೀ ಷಡಕ್ಷರಿ ಶಿವಯೋಗಿ ಮುರುಘೇಂದ್ರ ಮಹಾಸ್ವಾಮಿಗಳು ಈ ಎಲ್ಲ ಮಠಗಳ ಉಸ್ತುವಾರಿಯನ್ನು ಸಮರ್ಥವಾಗಿ ನೋಡಿಕೊಂಡು ಬರುತ್ತಿದ್ದಾರೆ. ಇವರು ತುಂಬಾ ಕ್ರಿಯಾಶೀಲರಾಗಿ ಸಮಾಜದ ಎಲ್ಲಾ ವರ್ಗಗಳ ಜನತೆಯ ಕಲ್ಯಾಣಕ್ಕಾಗಿ ಅವಿರತ ಶ್ರಮಿಸುತ್ತಿರುವರು.
ಶ್ರೀ ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರಕೃತಿ ವಿಕೋಪ ನೆರೆ ಹಾವಳಿಗೆ ತುತ್ತಾದ ಗೋಕಾಕ, ರಾಯಬಾಗ ಹಾಗೂ ಅಥಣಿ ತಾಲೂಕಿನ ನಾಗನೂರ, ಚಿಕ್ಕೋಡ, ದರೂರ, ಶಂಕರಟ್ಟಿ, ಗೋವಾ ಹಾಗೂ ತಮಿಳುನಾಡು ನಿರಾಶ್ರಿತರಿಗೆ ಧಾನ್ಯ, ಬಟ್ಟೆ, ಹಾಸಿಗೆ ಹಾಗೂ ಔಷಧಿಗಳನ್ನು ವಿತರಿಸಿ ಸಾಂತ್ವನ ಹೇಳಿದ್ದಾರೆ. ಮುಗಳಖೋಡ, ಜಿಡಗಾ, ನರಗುಂದ ಹಾಗೂ ವಿಜಾಪುರಗಳಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿ ವಧುವರರಿಗೆ ತಾಳಿ, ಕಾಲುಂಗುರ ಹಾಗೂ ಬಟ್ಟೆಗಳನ್ನು ಶ್ರೀಮಠದಿಂದ ವಿತರಿಸಿದ್ದಾರೆ. ಪ್ರತಿವರ್ಷ ಡಿಸೆಂಬರ್ ೨ ರಂದು ನಡೆಯುವ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಗುರುವಂದನ ಸಮಾರಂಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸುತ್ತ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಗಳು ಕೃಷಿಮೇಳ ನಡೆಸಿ ಬಡರೈತರಿಗೆ ಕೃಷಿ ಉಪಕರಣಗಳನ್ನೂ, ಕುಷ್ಠರೋಗಿಗಳಿಗೆ, ಸರ್ಕಾರಿ ಆಸ್ಪತ್ರೆಯಲ್ಲಿರುವ ಒಳರೋಗಿಗಳಿಗೆ ಹಾಲು, ಹಣ್ಣು, ಬಟ್ಟೆಗಳನ್ನು ವಿತರಿಸುತ್ತ ಬಂದುದು ಶ್ರೀಗಳವರ ಸಮಾಜ ಸೇವೆಗೆ ನಿದರ್ಶನಗಳಾಗಿವೆ. ಶ್ರೀಗಳು ತಮ್ಮ ಗುರುಗಳಾದ ಶ್ರೀ ಸಿದ್ಧರಾಮೇಶ್ವರರ ಹೆಸರಿನಲ್ಲಿ ’ಸಿದ್ಧಶ್ರೀ’ ಪ್ರಶಸ್ತಿಯನ್ನು ಪ್ರತಿವರ್ಷ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ನೀಡುತ್ತ ಬಂದಿದ್ದಾರೆ.
ಶ್ರೀ ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಕಿರಿಯ ವಯಸ್ಸಿನಲ್ಲಿ ಹಿರಿದಾದ ಸಾಧನೆ ಮಾಡಿದ್ದಾರೆ. ಅವರು ಒಬ್ಬ ವ್ಯಕ್ತಿಯಲ್ಲ, ಒಂದು ದಿವ್ಯಶಕ್ತಿಯಾಗಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದ ೩೦ ನೆಯ ವಾರ್ಷಿಕ ಘಟಿಕೋತ್ಸವದಲ್ಲಿ ಶ್ರೀ ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್ (ಡಿ.ಲಿಟ್) ಪದವಿಯನ್ನು ನೀಡಿ ಗೌರವಿಸಿದ್ದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ.
ಬುಧವಾರ ಡಾ. ಮುರುಘರಾಜೇಂದ್ರ ಸ್ವಾಮಿಗಳ ಗುರುವಂದನಾ ಕಾರ್ಯಕ್ರಮ :
ಜಿಡಗಾ ಹಾಗೂ ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಶ್ರೀ ಯಲ್ಲಾಲಿಂಗೇಶ್ವರ ಹಾಗೂ ಶ್ರೀ ಸಿದ್ಧರಾಮೇಶ್ವರ ಕರ್ತೃ ಗದ್ದುಗೆಗೆ ಅರ್ಚಕರಿಂದ ಅಭಿಷೇಕ ಹಾಗೂ ವಿಶೇಷ ಪೂಜೆ ಆಯಾ ಶಾಖಾ ಮಠಗಳಲ್ಲಿ ನಡೆಯಲಿದೆ. ಜಗತ್ತಿನಾದ್ಯಂತ ಕರೋನಾ ಸಂಕಷ್ಟ ಕಾಲದಲ್ಲಿ ಸಾಮಾಜಿಕ ಅಂತರದೊಂದಿಗೆ ತಮ್ಮ ಗುರುವಂದನಾ ಕಾರ್ಯಕ್ರಮವನ್ನು ಅಂಧ, ವಿಶೇಷಚೇತನ, ಬಡವರು ಹಾಗೂ ದೀನ ದಲಿತರಿಗೆ ದಾನ-ಧರ್ಮ ಮಾಡುವುದರ ಜೊತೆಗೆ ಗೋ-ಮಾತೆಗಳನ್ನು ಪೂಜಿಸುವುದರ ಜೊತೆಗೆ ಆಚರಿಸಬೇಕೆಂದು ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಭಕ್ತರಿಗೆ ಸಂದೇಶ ನೀಡಿದ್ದಾರೆ. ಸಂಜೆ ೫ ಗಂಟೆಗೆ ಶ್ರೀ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಶಾಸಕರು, ಸಂಸದರು, ಸಚಿವರು ಹಾಗೂ ರಾಜಕೀಯ ಮುಖಂಡರು, ಭಕ್ತರು ಪಾಲ್ಗೊಳ್ಳಲಿದ್ದಾರೆ.