ಪ್ರಗತಿವಾಹಿನಿ ಸುದ್ದಿ, ಕೋಲಾರ – ಮಾಜಿ ಸಚಿವ ವರ್ತೂರು ಪ್ರಕಾಶ ಅವರನ್ನು ಅಪಹರಣ ಮಾಡಿ, ಚಿತ್ರಹಿಂಸೆ ನೀಡಿ ಎಸೆದು ಹೋಗಲಾಗಿತ್ತು ಎನ್ನುವ ಆತಂಕಕಾರಿ ದೂರು ದಾಖಲಾಗಿದೆ.
ಕೋಲಾರ ತಾಲೂಕಿನ ಅವರ ಬೆಗ್ಲಿ ಹೊಸಳ್ಳಿಯ ತೋಟದ ಮನೆಯಿಂದ ಬೆಂಗಳೂರಿಗೆ ಹೊರಡುತ್ತಿದ್ದ ವೇಳೆ ಹಲ್ಲೆ ಮಾಡಿ ಅವರನ್ನು ಅಪಹರಿಸಲಾಗಿದ್ದು, 30 ಕೋಟಿ ರೂ.ಗೆ ಬೇಡಿಕೆ ಇಡಲಾಗಿತ್ತು ಎಂದು ದೂರು ನೀಡಲಾಗಿದೆ.
ತಮ್ಮನ್ನು 8 ಜನರ ತಂಡ ಕಳೆದ ಬುಧವಾರ ಅಪಹರಿಸಿ ಅಜ್ಞಾತ ಸ್ಥಳದಲ್ಲಿಟ್ಟು ಚಿತ್ರಹಿಂಸೆ ನೀಡಿದೆ ಎಂದು ಪ್ರಕಾಶ್ ಸ್ವತಃ ದೂರು ದಾಖಲಿಸಿದ್ದಾರೆ.
3 ದಿನ ಚಿತ್ರಹಿಂಸೆ ನೀಡಿ ನಂತರ ಬೆಂಗಳೂರು ಹೊರವಲಯದ ಸ್ಮಶಾನವೊಂದರ ಬಳಿ ಬೆತ್ತಲೆಯಾಗಿ ಎಸೆದು ಹೋಗಲಾಗಿತ್ತು ಎಂದು ತಿಳಿಸಲಾಗಿದೆ.
ವರ್ತೂರು ಪ್ರಕಾಶ ಜೊತೆಗೆ ಅವರ ಕಾರು ಚಾಲಕ ಸುನೀಲ್ ಎನ್ನುವವರನ್ನೂ ಅಪಹರಿಸಲಾಗಿತ್ತು. 2 ದಿನಗಳ ನಂತರ ಸುನೀಲ್ ತಪ್ಪಿಸಿಕೊಂಡು ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಎಲ್ಲಿಯೂ ದೂರು ನೀಡುವ ಕೆಲಸ ಮಾಡಲಿಲ್ಲ. ಆಸ್ಪತ್ರೆಯಲ್ಲೂ ಸುಳ್ಳು ಹೇಳಿ ಚಿಕಿತ್ಸೆ ಪಡೆದಿದ್ದಾರೆ.
3 ದಿನಗಳ ನಂತರ ಪ್ರಕಾಶ ಅವರನ್ನು ಎಸೆದು ಹೋಗಲಾಗಿತ್ತು. ಅವರೂ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅವರ ಕಾರು ಅನಾಥವಾಗಿ ನಿಂತಿತ್ತು. ಇದನ್ನು ಗಮನಿಸಿ ಪೊಲೀಸರು ದೂರು ಪಡೆದಿದ್ದಾರೆ.
ವರ್ತೂರು ಪ್ರಕಾಶ್ ತಮ್ಮ ಸಹಾಯಕರೊಬ್ಬರ ಮೂಲಕ 48 ಲಕ್ಷ ರೂ. ತರಿಸಿಕೊಂಡು ಅಪಹರಣಕಾರರಿಗೆ ನೀಡಿದ್ದರು. ಆದರೂ ಹೆಚ್ಚಿನ ಹಣಕ್ಕಾಗಿ ಹಿಂಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಕರಣ ಭಾರಿ ಕುತೂಹಲ ಮೂಡಿಸಿದ್ದು, ಹಲವಾರು ಸಂಶಯಗಳನ್ನು ಹುಟ್ಟುಹಾಕಿದೆ. ಪೂರ್ಣ ವಿವರ ತನಿಖೆಯ ನಂತರವಷ್ಟೆ ತಿಳಿಯಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ