ಪ್ರಗತಿವಾಹಿನಿ ಸುದ್ದಿ: ಭ್ರಷ್ಟಾಚಾರ ಎಲ್ಲಾ ಸಮಾಜ ಮತ್ತು ದೇಶಕ್ಕೆ ಅಂಟಿದ ರೋಗವಾಗಿದ್ದು, ಇದರ ನಿರ್ಮೂಲನೆ ಆಗಬೇಕೆಂದರೆ ಯಾರೂ ಜಾತಿ ಲೇಪನ ಮಾಡಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಭ್ರಷ್ಟಾಚಾರಕ್ಕೆ ಯಾವುದೇ ಜಾತಿ ಎಂಬುದಿಲ್ಲ. ಎಲ್ಲಾ ಸಮಾಜ ಮತ್ತು ದೇಶಕ್ಕೆ ಅಂಟಿದ ಪಿಡುಗಾಗಿದೆ. ಹಾಗಾಗಿ ಇದರ ವಿರುದ್ಧ ಹೋರಾಟಕ್ಕಿಳಿದರೆ ಯಾರೂ ಜಾತಿಯ ನೆಪವನ್ನು ಮುಂದಿಡಬಾರದು ಎಂದು ಕಾಂಗ್ರೆಸ್ಸಿಗರಿಗೆ ಕಿವಿಮಾತು ಹೇಳಿದರು.
ಮುಡಾ ಹಗರಣದಲ್ಲಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಹಿಂದ ವರ್ಗವರು ಜಾತಿ ಲೇಪನ ಹಚ್ಚಿ ಬೀದಿಗಿಳಿದು ಹೋರಾಡುವುದು ಸರಿಯಲ್ಲ ಎಂದು ಜೋಶಿ ಖಂಡಿಸಿದರು.
ರಾಜ್ಯಪಾಲರು ಅತ್ಯಂತ ಹಿಂದುಳಿದ, ಎಸ್ಸಿ ಸಮಾಜಕ್ಕೆ ಸೇರಿದವರು. ಅಂಥವರ ವಿರುದ್ಧ ಬೀದಿಗಿಳಿಯುವುದು ಕಾಂಗ್ರೆಸ್ಸಿಗೆ ಶೋಭೆ ತರದು ಎಂದರು.
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಜನಕ: ದೇಶದಲ್ಲಿ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಜನಕ. ನೆಹರು ಕಾಲದಿಂದ ಮನಮೋಹನ್ ಸಿಂಗ್ ಕಾಲದವರೆಗೂ ಕಾಂಗ್ರೆಸ್ ಭ್ರಷ್ಟಾಚಾರವನ್ನು ಪೋಷಿಸಿಕೊಂಡು ಬಂದಿದೆ. ಹಾಗಾಗಿ ಈಗ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಅವರ ಪರ, ಬೆಂಬಲಕ್ಕೆ ನಿಂತಿದ್ದು, ಇದರಲ್ಲಿ ಆಶ್ಚರ್ಯ ಏನಿಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು.
ಆತ್ಮಸಾಕ್ಷಿ ಇದ್ರೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ ಎಂದು ಹೇಳಿದರು.
ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಸ್ವತಃ ನೀವೇ ಸಿಎಂ ಆಗಿರುವಾಗ ಸ್ಥಳೀಯ ಅಧಿಕಾರಿಗಳು ತನಿಖೆ ಹೇಗೆ ಮಾಡಿಯಾರು? ಎಂದು ಪ್ರಶ್ನಿಸಿದ ಜೋಶಿ, ಸಿಎಂ ಆರೋಪ ಮುಕ್ತರಾಗುವ ತನಕ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಪ್ರಲ್ಹಾದ ಜೋಶಿ ಒತ್ತಾಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ