Kannada NewsKarnataka NewsLatestPolitics

*ಡಿಸ್ಟಿಲರಿಗಳಿಗೆ ಪತ್ರ: ಸಿಎಂಗೆ ಈಗ ಜ್ಞಾನೋದಯವಾಗಿದೆ ಎಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ*

ಪ್ರಗತಿವಾಹಿನಿ ಸುದ್ದಿ: “ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಜ್ಞಾನೋದಯ ಆದಂತಿದೆ’ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಕಬ್ಬು ಬೆಳೆಗಾರರು ಮತ್ತು ಮೆಕ್ಕೆಜೋಳ ರೈತರ ವಿಚಾರದಲ್ಲಿ ಸಿಎಂ ಸ್ವಲ್ಪ ತಡವಾಗಿ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತುಕೊಂಡಿದ್ದಾರೆ. ಅಂತೂ ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳ ಖರೀದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಡಿಸ್ಟಿಲರಿಗಳಿಗೆ ಪತ್ರ ಬರೆದಿದ್ದಾರೆಂದು ಜೋಶಿ ಹೇಳಿದ್ದಾರೆ.

ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳ ಖರೀದಿಗೆ NCCF ಮತ್ತು NAFED ಜತೆ ಒಪ್ಪಂದ ಮಾಡಿಕೊಳ್ಳುವಂತೆ ಡಿಸ್ಟಿಲರಿಗಳಿಗೆ ಪತ್ರ ಬರೆಯುವ ಬುದ್ಧಿ ಈಗಲಾದರೂ ಬಂದಿತಲ್ಲ ಎಂದಿರುವ ಜೋಶಿ, ಇಷ್ಟು ದಿನ ಪ್ರತಿಯೊಂದಕ್ಕೂ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುತ್ತಿದ್ದ ಸಿಎಂಗೆ ಈಗ ಜ್ಞಾನೋದಯವಾಗಿದೆ ಎಂದಿದ್ದಾರೆ.

ಎಥೆನಾಲ್ ಉತ್ಪಾದನೆಗಾಗಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಿಕೊಳ್ಳಲು NCCF ಮತ್ತು NAFED ನೊಂದಿಗೆ ಒಪ್ಪಂದ ಮಾಡಿಕೊಳ್ಳತಕ್ಕದ್ದೆಂದು ಸಿಎಂ ಇದೀಗ ಡಿಸ್ಟಿಲರಿಗಳಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರಕ್ಕೆ ತನ್ನ ಕಾರ್ಯದ ಬಗ್ಗೆ ಅರಿವಾದಂತಿದೆ ಎಂದಿದ್ದಾರೆ.

Home add -Advt

ರಾಜ್ಯ ಸರ್ಕಾರ ಹೊಣೆಗಾರಿಕೆ ಮರೆತ ಬಗ್ಗೆ ನಿನ್ನೆ ತಾನೇ ಮಾಧ್ಯಮಗಳೆದುರು ಪ್ರಸ್ತಾಪಿಸಿದ್ದೆ. ಮೆಕ್ಕೆಜೋಳ ಖರೀದಿ ವಿಚಾರವಾಗಿ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೊರಡಿಸಿರುವ ಮಾರ್ಗಸೂಚಿಗಳನ್ನು (SOP) ಪಾಲಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿತ್ತು. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ರಾಜ್ಯ ಸರ್ಕಾರಕ್ಕೆ ಇದೀಗ ಬುದ್ಧಿ ಬಂದಿದೆ ಎಂದಿದ್ದಾರೆ.

ಇನ್ನಾದರೂ ಕೇಂದ್ರದತ್ತ ಬೆರಳು ತೋರದಿರಲಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನಾದರೂ ರೈತರಲ್ಲಿ ಇಲ್ಲ ಸಲ್ಲದ ಗೊಂದಲ ಸೃಷ್ಟಿಸುವುದನ್ನು ಬಿಡಲಿ. ತಮ್ಮ ಸರ್ಕಾರದ ಆಡಳಿತ ವೈಫಲ್ಯ ಮರೆಮಾಚುವುದಕ್ಕಾಗಿ ಕೇಂದ್ರ ಸರ್ಕಾರದತ್ತ ಬೆರಳು ತೋರುವುದನ್ನು ಇಲ್ಲಿಗೇ ನಿಲ್ಲಿಸಲಿ. ರಾಜ್ಯದಲ್ಲಿ ಜನ ಕೊಟ್ಟ ಅಧಿಕಾರವನ್ನು ಜನರಿಗಾಗಿ ಸದ್ವಿನಿಯೋಗ ಆಗುವಂತೆ ಪಾರದರ್ಶಕ ಆಡಳಿತ ನಿರ್ವಹಿಸಲಿ ಎಂದು ಸಚಿವ ಪ್ರಲ್ಹಾದ ಜೋಶಿ ಸಲಹೆ ಮಾಡಿದ್ದಾರೆ.

Related Articles

Back to top button