*ಕಬ್ಬು ಬೆಳೆಗಾರರ ಸಮಸ್ಯೆ ಕ್ಷಣವೂ ತಡಮಾಡದೆ ಪರಿಹರಿಸಲಿ ಸರ್ಕಾರ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಒಂದು ಕ್ಷಣವೂ ತಡಮಾಡದೆ ಕಬ್ಬು ಬೆಳೆಗಾರ ರೈತರ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರ ತಕ್ಷಣವೇ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಮಾತುಕತೆಗೆ ಕರೆದು ಚರ್ಚಿಸಿ ತ್ವರಿತವಾಗಿ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.
ಅನ್ನದಾತರನ್ನು ರಸ್ತೆ ಮೇಲೆ ಕೂರಿಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಸಂಬಂಧಿತ ಸಚಿವರು ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು. ಕಬ್ಬು ಬೆಳೆಗಾರರ ನ್ಯಾಯುತ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರ ವಿಚಾರದಲ್ಲಿ ರಾಜ್ಯ ಸರ್ಕಾರ ವಿನಾಕಾರಣ ಕಾಲಹರಣ ಮಾಡುವುದು ಸರಿಯಲ್ಲ. ಮತ್ತು ರಾಜಕೀಯದ ಹೇಳಿಕೆ ನೀಡಿ ಪಾರಾಗುವುದು ಹಾಗೂ ಕೇಂದ್ರ ಸರ್ಕಾರದತ್ತ ಬೆರಳು ತೋರುವುದು ಸರಿಯಲ್ಲ ಎಂದು ಸಚಿವ ಜೋಶಿ ಖಂಡಿಸಿದರು.
ಹೆಚ್ಚುವರಿ ಸಕ್ಕರೆ ರಫ್ತು ಅನುಮತಿ ನೀಡಾಗಿದೆ: ಕೇಂದ್ರ ಸರ್ಕಾರ ಆಗಲೇ, ಸಕ್ಕರೆ ರಫ್ತು ಮಾಡಲು ಅನುಮತಿ ನೀಡಿದ್ದಾಗಿದೆ. ಸಕ್ಕರೆ ಕಾರ್ಖಾನೆಗಳು ರಫ್ತು ಅನುಮತಿ ಕೋರಿದ್ದವು. ಅದರಂತೆ 15 ಲಕ್ಷ ಟನ್ ಹೆಚ್ಚುವರಿ ಸಕ್ಕರೆ ರಫ್ತುಗೆ ಅನುಮತಿ ನೀಡಿದೆ. ಅಲ್ಲದೇ, ಮೊಲಾಸಿಸ್ ರಫ್ತುಗೂ ಕೇಂದ್ರ ಅನುಮತಿ ನೀಡಿದೆ. ರೈತರು ಕೇಳಿದಂತೆ ₹ 3500 ಟನ್ ಬೆಲೆಯನ್ನೂ ಕೊಟ್ಟಿದೆ ಎಂದು ತಿಳಿಸಿದರು
ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರ ಶೇ.99ರಷ್ಟು ಪೇಮೆಂಟ್ ಮಾಡಿದೆ. ಕಳೆದ ಬಾರಿ 35 ಲಕ್ಷ ಮೆಟ್ರಿಕ್ ಟನ್ ಎಥೆನಾಲ್ ಆಗಿದೆ. FRP 3400 ಇದ್ದದ್ದನ್ನು 3500 ಮಾಡಿದೆ. ರಾಜ್ಯ ಸರ್ಕಾರ ವಿನಾಕಾರಣ ಕೇಂದ್ರದತ್ತ ಬೆರಳು ತೋರುವುದು ಸಲ್ಲದು ಎಂದು ಪ್ರಲ್ಹಾದ ಜೋಶಿ ಹೇಳಿದರು.
ರಾಹುಲ್ ಗಾಂಧಿ ಸಹವಾಸ ದೋಷ: ಸಹವಾಸದಿಂದ ಹುಲಿಮರಿ ಕುರಿಮರಿ ಆಯಿತೆಂಬ ಮಾತಿದೆ. ಅಂತೆಯೇ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಸಹವಾಸ ದೋಷ. ಹಾಗಾಗಿ ಏನೇನೋ ಮಾತನಾಡುತ್ತಾರೆ ಎಂದು ಜೋಶಿ ಟೀಕಿಸಿದರು.
ನವೆಂಬರ್ ಕ್ರಾಂತಿ ಹೇಳಿಕೆ ಅಭದ್ರತೆ ಸಂಕೇತ: ರಾಜ್ಯದಲ್ಲಿ ಬೆಳಕು ಹರಿದರೆ ನವೆಂಬರ್ ಕ್ರಾಂತಿಯದ್ದೇ ಸುದ್ದಿ. ಕಾಂಗ್ರೆಸ್ಸಿಗರ ನವೆಂಬರ್ ಕ್ರಾಂತಿ ಹೇಳಿಕೆ ಸರ್ಕಾರದ ಅಭದ್ರತೆಯ ಸಂಕೇತ ಎಂದು ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿತ್ಯವೂ ‘ಐದು ವರ್ಷ ನಾನೇ ಸಿಎಂ’ ಎನ್ನುತ್ತಿದ್ದಾರೆ. ಸಚಿವರುಗಳು ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಕುರ್ಚಿ ಗದ್ದಲದಲ್ಲಿ ಆಡಳಿತ ವ್ಯವಸ್ಥೆಯೇ ಸಂಪೂರ್ಣ ಕುಸಿದಿದೆ ಎಂದು ಜೋಶಿ ಆರೋಪಿಸಿದರು.
ನವೆಂಬರ್ ಕ್ರಾಂತಿ ಮಾಡುತ್ತಾರೋ ಅಥವಾ ಬರೀ ಭ್ರಾಂತಿಯಲ್ಲೇ ಇರುತ್ತಾರೋ ಗೊತ್ತಿಲ್ಲ. ಆದರೆ, ರಾಜ್ಯದ ಜನತೆ 5 ವರ್ಷ ಆಡಳಿತ ನೀಡಿದ್ದಾರೆ. ಒಳ್ಳೇ ರೀತಿಯಲ್ಲಿ ನಿಭಾಯಿಸಲಿ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು.
Time 100 ಕೀರ್ತಿ ಮೋದಿ ಅವರಿಗೆ: ಹವಾಮಾನ ಸುಸ್ಥಿರತೆಗಾಗಿ ಅಮೇರಿಕಾದ TIME 100 ವಿಶ್ವ ಪ್ರಸಿದ್ಧರ ಪಟ್ಟಿಯಲ್ಲಿ ತಮ್ಮನ್ನು ಹೆಸರಿಸಿದ್ದು, ಈ ಕೀರ್ತಿ, ಹೆಗ್ಗಳಿಕೆ ನಿಜವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕೆಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸೌರಶಕ್ತಿ, ನವೀಕರಿಸಬಹುದಾದ ಇಂಧನ ಪ್ರಗತಿಗೆ ಪ್ರಧಾನಿ ಮೋದಿ ಅವರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅವರ ನೇತೃತ್ವ, ಮಾರ್ಗದರ್ಶನದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಲಾಗಿದೆ. ಈ ಇಲಾಖೆ ಸಚಿವನಾಗಿದ್ದರಿಂದ ನನ್ನ ಹೆಸರು ಬಂದಿದೆ. ಆದರೆ, ಇದೊಂದು ಅಭೂತಪೂರ್ವ ಸಾಧನೆ. ಇದು ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು ಎಂದು ಜೋಶಿ ಅಭಿಪ್ರಾಯಿಸಿದರು.



