*ನಿಜವಾಗಿ ಕರ್ನಾಟಕದ ಬಡವರ ಹಸಿವು ನೀಗಿಸಿದ್ದು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ: ಪ್ರಲ್ಹಾದ ಜೋಶಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ಕೊಡದೇ ಇದ್ದರೂ ಜನ ಹಸಿವಿನಿಂದ ಬಳಲು ಕೇಂದ್ರ ಬಿಡಲಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶಿಗ್ಗಾವಿ- ಸವಣೂರು ವಿಧಾನಸಭಾ ಕ್ಷೇತ್ರದ ಶಿಶುವಿನಹಾಳ, ಹಿರೇಮಲ್ಲೂರ, ಹನುಮನಹಳ್ಳಿ ಮತ್ತು ವನಹಳ್ಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಹಸಿವುಮುಕ್ತ ಕರ್ನಾಟಕ ಮಾಡುತ್ತೇವೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದೆಲ್ಲಾ ಗ್ಯಾರೆಂಟಿ ಘೋಷಣೆ ಮಾಡಿದ ಕಾಂಗ್ರೆಸ್ ಸರ್ಕಾರ ಜನಕ್ಕೆ ಕೈ ಕೊಟ್ಟಿತು. ಆದರೆ ನಿಜವಾಗಿ ಹಸಿವು ನೀಗಿಸಿದ್ದು ಕೇಂದ್ರದ “ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ” ಎಂದು ಪ್ರತಿಪಾದಿಸಿದರು.
ಸದ್ಯದ ಬರ ಪರಿಸ್ಥಿತಿಯಲ್ಲಿ ನಮ್ಮ ಧಾರವಾಡ ಲೋಕಸಭಾ ಕ್ಷೇತ್ರವೊಂದರಲ್ಲೇ ಸರಿಸುಮಾರು 15 ಲಕ್ಷ ಫಲಾನುಭವಿಗಳಿಗೆ ಗರೀಬ್ ಕಲ್ಯಾಣ್ ಅನ್ನ ಯೋಜನೆ ಆಸರೆಯಾಗಿದೆ. ಆದರೆ, “ಹ…ತ್ತು ಕೇಜಿ ಅಕ್ಕಿ.. ಬೇಕಾ… ಬೇಡ್ವಾ..?” ಎಂದು ಗ್ಯಾರೆಂಟಿ ಘೋಷಿಸಿದ ಸಿಎಂ ಸಿದ್ದರಾಮಯ್ಯ ಅವರು ಜನರ ಹಸಿವು ನೀಗಿಸುವಲ್ಲಿ ನಿಜವಾದ ಕಾಳಜಿ ತೋರಲಿಲ್ಲ ಎಂದು ಸಚಿವ ಜೋಶಿ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬರ ಭೀಕರತೆ ಇದ್ರೂ ಜನತೆ ಅಷ್ಟಾಗಿ ಸಂಕಷ್ಟಕ್ಕೆ ಸಿಲುಕಲಿಲ್ಲ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ ನರೇಂದ್ರ ಮೋದಿ ಅವರು ಕಾಪಾಡಿದ್ದಾರೆ ಎಂದು ಸಚಿವ ಜೋಶಿ ಸಮರ್ಥಿಸಿಕೊಂಡರು.
ಬಡವರ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡೀಗೌಡರ, ಶಶಿಧರ ಯಲಿಗಾರ, ತಿಪ್ಪಣ್ಣ ಸಾತಣ್ಣವರ, ಪ್ರಸಾದ ಸುರಗಿಮಠ, ರವಿ ಕುಡೊಕ್ಕಲಿಗಾರ , ಬಸವರಾಜ್ ನಾರಾಯಣಪುರ , ಶ್ರೀಕಾಂತ ಬುಳ್ಳಕ್ಕನವರ, ದೇವಣ್ಣ ಚಾಕಲಬ್ಬಿ, ಶಂಕರ ಪೊಲೀಸ್ ಗೌಡ್ರು, ಹೊನ್ನಪ್ಪ ಹೂಗಾರ, ಸೋಮಯ್ಯ ಗೌರಿಮಠ, ಅರ್ಜುನ ಹಂಚಿನಮನಿ ಹಾಗು ಪಕ್ಷದ ಪ್ರಮುಖರು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ