*ಈ ಸರ್ಕಾರ ಇದ್ದರೆಷ್ಟು- ಬಿಟ್ಟರೆಷ್ಟು ಎನ್ನುತ್ತಿದ್ದಾರೆ ಕಾಂಗ್ರೆಸ್ ಶಾಸಕರು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಒಬ್ಬ ಅಶಕ್ತ ಮುಖ್ಯಮಂತ್ರಿ ಇರುವುದರಿಂದ ಜನರಿಗಷ್ಟೇ ಅಲ್ಲ, ಕಾಂಗ್ರೆಸ್ ಶಾಸಕರಿಗೇ ಈ ಸರ್ಕಾರ ಇದ್ದರೆಷ್ಟು-ಬಿಟ್ಟರೆಷ್ಟು ಎನಿಸಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಕೋಲಾರದ ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಲು ಸ್ಪೀಕರ್ ಗೆ ಸಮಯ ಕೇಳಿದ್ದರ ಬಗ್ಗೆ ಹೀಗೆ ಪ್ರತಿಕ್ರಿಯಿಸಿದರು.
ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೂ ಸರಿಯಿಲ್ಲ. ಮುನಿಯಪ್ಪ ಅವರ ಅಳಿಯನಿಗೆ ಟಿಕೆಟ್ ಕೊಟ್ಟಿದ್ದನ್ನು ಅಲ್ಲಿಯ ಶಾಸಕರು ವಿರೋಧಿಸುತ್ತಿದ್ದಾರೆ ಎನ್ನುವುದು ಸತ್ಯ. ಅಲ್ಲದೇ, ಮುಖ್ಯಮಂತ್ರಿ ಒಬ್ಬ ಅಶಕ್ತ ಮುಖ್ಯಮಂತ್ರಿ ಆಗಿದ್ದರಿಂದ ರಾಜೀನಾಮೆ ಸಲ್ಲಿಕೆ ನಿರ್ಧಾರದಂಥ ಚಟುವಟಿಕೆಯಲ್ಲಿ ಕಾಂಗ್ರೆಸ್ ಶಾಸಕರು ತೊಡಗಿದ್ದಾರೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕಚ್ಚಾಟ, ಕೇಂದ್ರ ಸರ್ಕಾರ NDRF ನಲ್ಲಿ 2.36 ಲಕ್ಷ ಕೋಟಿ ಕೊಟ್ಟರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದು, ದೇಶದ ಪ್ರಧಾನಿ ಬಗ್ಗೆ ಆಗೌರವದ ಮಾತು ಮತ್ತು ಪಕ್ಷದೊಳಗಿನ ಆಂತರಿಕ ತಿಕ್ಕಾಟ ಇದೆಲ್ಲದರಿಂದ ಕಾಂಗ್ರೆಸ್ ಶಾಸಕರು ಬೇಸತ್ತು ಹೋಗಿದ್ದಾರೆ. ಹಾಗಾಗಿ ಈ ಸರ್ಕಾರ ಇದ್ದರೆಷ್ಟು-ಬಿದ್ದರೆಷ್ಟು ಎಂಬ ನಿರ್ಧಾರಕ್ಕೆ ಕೋಲಾರ ಶಾಸಕರು ಬಂದಂತಿದೆ ಎಂದು ವಿಶ್ಲೇಶಿಸಿದರು.
ಪೊಳ್ಳು ಗ್ಯಾರೆಂಟಿಗಳಿಂದಾಗಿ ಕಾಂಗ್ರೆಸ್ ಶಾಸಕರು ಮಾತ್ರವಲ್ಲ, ರಾಜ್ಯದ ಜನರೂ ಈ ಸರ್ಕಾರ ಇರದಿರುವುದೇ ಒಳ್ಳೆಯದು ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಚಿವ ಜೋಶಿ ಹೇಳಿದರು.
ಸರ್ಕಾರ ನಡೆಸಲು ಆಗುತ್ತಿಲ್ಲ ಇವರಿಗೆ: ರಾಜ್ಯದಲ್ಲಿ ಕಾಂಗ್ರೆಸ್ ನವರಿಗೆ ಸರಿಯಾಗಿ ಸರ್ಕಾರ ನಡೆಸಲು ಆಗುತ್ತಿಲ್ಲ. ಶೇ.75ರಷ್ಟು ಅನುದಾನವನ್ನು ಕೇಂದ್ರ ಕೊಟ್ಟಿದ್ದರೂ ಅನಗತ್ಯವಾಗಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ತಮ್ಮ ವೈಫಲ್ಯವನ್ನು ನಮ್ಮ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಹ್ಲಾದ ಜೋಶಿ ಕಿಡಿ ಕಾರಿದರು.
ಅನೇಕರು ಬಿಜೆಪಿ ಸೇರ್ತಿದ್ದಾರೆ: ವಿಪಕ್ಷಗಳ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿಗೆ ಬರುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ