Politics

*ಸಚಿವರ-ಶಾಸಕರ ವೇತನ ಹೆಚ್ಚಿಸಿಕೊಳ್ಳುವ ಅಗತ್ಯವೇನಿತ್ತು? ಪ್ರಹ್ಲಾದ್ ಜೋಶಿ ಪ್ರಶ್ನೆ*

ಹನಿ ಟ್ರ್ಯಾಪ್ ಪ್ರಕರಣ ಸಿಬಿಐಗೆ ವಹಿಸಲಿ; ಪ್ರಭಾವಿ ಸಚಿವ ಯಾರು ಬಹಿರಂಗಪಡಿಸಲಿ

ಪ್ರಗತಿವಾಹಿನಿ ಸುದ್ದಿ: ಹನಿ ಟ್ರ್ಯಾಪ್ ಪ್ರಕರಣದ ಹಿಂದೆ ಪ್ರಭಾವಿ ಸಚಿವರಿದ್ದಾರೆಂದು ಕಾಂಗ್ರೆಸ್ ಪಕ್ಷದವರೇ ಹೇಳುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಇದನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಹನಿ ಟ್ರ್ಯಾಪ್ ಪ್ರಕರಣಗಳ ಹಿಂದೆ ಯಾವ ಪ್ರಭಾವಿ ಸಚಿವರಿದ್ದಾರೆ? ಎಂಬುದನ್ನು ಕಾಂಗ್ರೆಸ್ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

Home add -Advt

ಹನಿ ಟ್ರ್ಯಾಪ್ ಜನಪ್ರತಿನಿಧಿಗಳಿಗೆ, ಸಮಾಜಕ್ಕೆ ಒಂದು ಕಳಂಕ, ಕಂಠಕವಾಗಿ ಪರಿಣಮಿಸಿದೆ. ಇದರ ಗಂಭೀರತೆ ಅರಿತು ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ಇಲ್ಲವೇ ಹೈಕೋರ್ಟ್ ಮಾನಿಟರಿ ಮೂಲಕ ತನಿಖೆ ನಡೆಸಬೇಕು ಎಂದು ಸಲಹೆ ನೀಡಿದರು.

ಹನಿ ಟ್ರ್ಯಾಪ್ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸುತ್ತಿದೆ. ಕಾಂಗ್ರೆಸ್ ಸಚಿವ ಶಾಸಕರುಗಳೇ ಒಂದೊಂದೇ ವಿಷಯ ಹೊರಗೆಡವುತ್ತಿದ್ದಾರೆ. ಹನಿ ಟ್ರ್ಯಾಪ್ ಅಲ್ಲಿ ಯಾವ ಪ್ರಭಾವಿ ಸಚಿವರ ಕೈವಾಡವಿದೆ? ಎಂಬುದನ್ನು ಸರ್ಕಾರ ಮೊದಲು ತನಿಖೆ ನಡೆಸಲಿ ಎಂದರು.

ಶಾಸಕ-ಸಚಿವರ ವೇತನ ಹೆಚ್ಚಳದ ಅಗತ್ಯವೇನಿತ್ತು?

ರಾಜ್ಯ ಸರ್ಕಾರ ಸಿಎಂ, ಡಿಸಿಎಂ, ಸಚಿವರು, ಶಾಸಕರುಗಳ ವೇತನ ಹೆಚ್ಚಿಸಿಕೊಂಡಿದೆ. ಇದರ ಅಗತ್ಯವೇನಿತ್ತು? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.

ಕರ್ನಾಟಕ ಸರ್ಕಾರ ಆರ್ಥಿಕ ತೀವ್ರ ಸಂಕಷ್ಟ ಎದುರಿಸುತ್ತಿರುವಾಗ ವೇತನ ಹೆಚ್ಚಳ ಅಪ್ರಸ್ತುತವಾಗಿತ್ತು. ಎರಡು ವರ್ಷಗಳ ಹಿಂದಷ್ಟೇ ವೇತನ ಹೆಚ್ಚಳ ಮಾಡಲಾಗಿದೆ. ಈಗ ಮತ್ತೆ ಹೆಚ್ಚಿಸುವುದು ಅಪೇಕ್ಷಣಿಯವಲ್ಲ ಎಂದರು.

ಕರ್ನಾಟಕ ಯಾವಾಗಲೂ ತನ್ನದೇ ಆದ ವ್ಯವಸ್ಥೆಯೊಂದಿಗೆ ಕಾರ್ಯ ನಿರ್ವಹಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಗುತ್ತಿಗೆದಾರರಿಗೆ ಪಾವತಿಸಲು ಮತ್ತು ರಸ್ತೆ ನಿರ್ಮಾಣಕ್ಕೆ ಹಣವಿಲ್ಲದೆ ಸರ್ಕಾರ ಹೆಣಗಾಡುತ್ತಿದೆ. ಹೀಗಿರುವಾಗ ಸಚಿವ-ಶಾಸಕರ ವೇತನ ಹೆಚ್ಚಳ ಅಗತ್ಯವಿರಲಿಲ್ಲ ಎಂದು ಸಚಿವ ಜೋಶಿ ಅಭಿಪ್ರಾಯಪಟ್ಟರು.

ರಾಜ್ಯದ ಜನ ಕುಡಿಯುವ ನೀರು, ರಸ್ತೆ ಮುಂತಾದ ಅಭಿವೃದ್ಧಿಯನ್ನು ಅಪೇಕ್ಷಿಸುತ್ತಿದ್ದಾರೆ ವಿನಃ ಸಚಿವ-ಶಾಸಕರ ವೇತನ ಹೆಚ್ಚಳವನ್ನಲ್ಲ. ಸ್ವತಃ ಶಾಸಕರೂ ಇದನ್ನು ಬಯಸಿರಲಿಲ್ಲ. ಅಭಿವೃದ್ಧಿಗೆ ಒತ್ತು ಕೊಡುವುದನ್ನು ಬಿಟ್ಟು ತಮ್ಮ ವೇತನ ಹೆಚ್ಚಳ ಮಾಡಿಕೊಂಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸರ್ಕಾರದ ಕಾಮಗಾರಿ ಗುತ್ತಿಗೆಗಳಲ್ಲಿ, ಉದ್ಯೋಗದಲ್ಲಿ ಧರ್ಮಾಧಾರಿತ ಮೀಸಲಾತಿಯನ್ನು ಯಾರೂ ಒಪ್ಪುವುದಿಲ್ಲ. ಸಂವಿಧಾನದಲ್ಲೂ ಇದನ್ನು ಹೇಳಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇದನ್ನೆಲ್ಲ ಮಾಡುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಖಂಡಿಸಿದರು.

Related Articles

Back to top button