*ರಾಜ್ಯ ಸರ್ಕಾರದ ಉದಾಸೀನಕ್ಕೆ ಈಗ ಪರಿಣಾಮ ಎದುರಿಸುವ ಸ್ಥಿತಿ: ಡ್ಯಾಂ ನಿರ್ವಹಣೆಗೆ ಕೇಂದ್ರ ಸಮಿತಿ ಸಲಹೆ ಧಿಕ್ಕರಿಸಿದ ಸರ್ಕಾರ; ಜೋಶಿ ಆರೋಪ*

ಪ್ರಗತಿವಾಹಿನಿ ಸುದ್ದಿ: ಜಲಾಶಯಗಳ ಸಮರ್ಪಕ ನಿರ್ವಹಣೆಗೆ ಕೇಂದ್ರ ಸಮಿತಿ ನೀಡಿದ ಸಲಹೆಗಳನ್ನು ರಾಜ್ಯ ಸರ್ಕಾರ ಧಿಕ್ಕರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬಿರುಕು ಬಿಟ್ಟು ಆತಂಕ ಸೃಷ್ಟಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಜಲಾಶಯಗಳ ನಿರ್ವಹಣೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೇಸಿಗೆಯಲ್ಲಿ ಜಲಾಶಯ ಖಾಲಿ ಇದ್ದಾಗಲೆ ನಿರ್ವಹಣೆ ಕಾರ್ಯ ಕೈಗೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರ ಉದಾಸೀನ ತೋರಿದೆ. ಈಗದರ ಪರಿಣಾಮ ಎದುರಿಸುವಂತಾಗಿದೆ ಎಂದು ಎಂದಿದ್ದಾರೆ.
ಕಳೆದ ಆರು ತಿಂಗಳ ಕಾಲ ಜಲಾಶಯ ಖಾಲಿ ಆಗಿತ್ತು. ರಾಜ್ಯ ಸರ್ಕಾರ ಆಗಲೇ ಸಮರ್ಪಕ ನಿರ್ವಹಣೆ ಕೈಗೊಳ್ಳಬೇಕಿತ್ತು. ಆದರದನ್ನು ಮಾಡಲಿಲ್ಲ. ಕೇಂದ್ರ ಸರ್ಕಾರದ ಸಲಹೆಗಳನ್ನೂ ಪಾಲಿಸದೇ ಧಿಕ್ಕರಿಸಿತು. ಸರ್ಕಾರ ಮತ್ತು ನಿರ್ವಹಣೆ ಹೊಣೆ ಹೊತ್ತವರ ತೀವ್ರ ನಿರ್ಲಕ್ಷ ತೋರಿದ್ದರಿಂದಲೇ ಈ ಅವಘಡ ಸಂಭವಿಸಿದೆ ಎಂದು ಜೋಶಿ ಆರೋಪಿಸಿದ್ದಾರೆ.
ರಸ್ತೆ ರಿಪೇರಿಗೂ ಹಣವಿಲ್ಲ: ರಾಜ್ಯ ಸರ್ಕಾರದ ಬಳಿ ರಸ್ತೆ ರಸ್ತೆ ರಿಪೇರಿಗೂ ಹಣವಿಲ್ಲ. ಇನ್ನು ಸಮಾನಾಂತರ ಜಲಾಶಯ ಹೇಗೆ ನಿರ್ಮಾಣ ಮಾಡುತ್ತಾರೆ ? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ಬೇಕಾಬಿಟ್ಟಿ ಆಡಳಿತ, ಭ್ರಷ್ಟಾಚಾರದ ಫಲವಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಹಾಗಾಗಿ ಜಲಾಶಯಗಳ ವ್ಯವಸ್ಥಿತ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದ್ದಾರೆ.
ಹತ್ತು ಸಾವಿರ ಕೋಟಿ ಎಲ್ಲಿ?: ಹಿಂದೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದಾಗ ಜಲಾಶಯಗಳ ನಿರ್ವಹಣೆಗೆ ಪ್ರತಿ ವರ್ಷ 10000 ಕೋಟಿ ವೆಚ್ಚ ಮಾಡುವುದಾಗಿ ಹೇಳಿದ್ದರು. ಆದರೆ, ಪ್ರತಿ ವರ್ಷವಲ್ಲ ಆಡಳಿತದ 5 ವರ್ಷವೂ ಹತ್ತು ಸಾವಿರ ಕೋಟಿ ಖರ್ಚು ಮಾಡಲಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಇನ್ನಾದರೂ ತುಂಗಭದ್ರಾ ಡ್ಯಾಂ ಸೇರಿದಂತೆ ರಾಜ್ಯದ ಎಲ್ಲಾ ಜಲಾಶಯಗಳ ನಿರ್ವಹಣೆಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ
ರೈತರಿಗೆ ಅನುಕೂಲ ಕಲ್ಪಿಸಲಿ: ರಾಜ್ಯ ಸರ್ಕಾರ ಕೂಡಲೇ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಸರಿಪಡಿಸಲು ಮುಂದಾಗಬೇಕು. ಈ ಮೂಲಕ ರೈತರಿಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ