ಪ್ರಗತಿವಾಹಿನಿ ಸುದ್ದಿ, ಹಾಸನ:
ಹಾಸನದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ಕುರಿತು ಅಸಮರ್ಪಕ ಮಾಹಿತಿ ನೀಡಿದ್ದಾರೆ ಎನ್ನುವ ಆರೋಪದ ಕುರಿತು ತನಿಖೆ ನಡೆಸುವಂತೆ ಚುನಾವಣೆ ಆಯೋಗ ಆದೇಶಿಸಿದೆ.
ಬಿಜೆಪಿ ಅಭ್ಯರ್ಥಿ ಎ. ಮಂಜು ಮತ್ತು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿದ ದೂರನ್ನು ಪರಿಗಣಿಸಿ ಹಾಸನ ಜಿಲ್ಲಾಧಿಕಾರಿಗೆ ತನಿಖೆಗೆ ಸೂಚಿಸಲಾಗಿದೆ.
ತಮ್ಮ ಬಳಿ 7.39 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್ ಸಲ್ಲಿಸಿದ್ದರು. ಅಲ್ಲದೆ 3.72 ಕೋಟಿ ರೂ ಸಾಲ ಹೊಂದಿರುವುದಾಗಿಯೂ ಹೇಳಿದ್ದರು. ಆದರೆ, ಆಸ್ತಿ ವಿವರಗಳಲ್ಲಿ ಅನೇಕ ಸಂಗತಿಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ. ಅವರ ಆಸ್ತಿ ವಿವರ ಅಪೂರ್ಣವಾಗಿದೆ ಎಂದು ದೂರು ನೀಡಲಾಗಿದೆ.
ಅವರು ಬೇರೆ ಬೇರೆ ಕಂಪೆನಿಗಳಲ್ಲಿ ಹಣ ಹೂಡಿದ್ದಾರೆ. ಹಾಸನದಲ್ಲಿ ಅವರ ಹೆಸರಿನಲ್ಲಿ ಕಲ್ಯಾಣ ಮಂಟಪವಿದೆ. ಇದೂ ಸೇರಿದಂತೆ ಅನೇಕ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ ಎಂದು ದೂರು ನೀಡಲಾಗಿತ್ತು.
ತುಮಕೂರಿನಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಎಚ್ ಡಿ ದೇವೇಗೌಡ ಅವರು ಮೊಮ್ಮಗ ಪ್ರಜ್ವಲ್‌ಗೆ 26 ಲಕ್ಷ ರೂ. ಸಾಲ ನೀಡಿರುವುದಾಗಿ ಉಲ್ಲೇಖಿಸಿದ್ದರು. ಇದು ಪ್ರಜ್ವಲ್ ಅವರ ಅಫಿಡವಿಟ್‌ನಲ್ಲಿ ಇಲ್ಲ. ಚೆನ್ನಾಂಬಿಕಾ ಕನ್ವೆನ್ಷನ್ ಹಾಲ್ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಕೀಲ ದೇವರಾಜೇಗೌಡ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದರು.
ಪ್ರಜಾಪ್ರತಿನಿಧಿ ಕಾಯ್ದೆ 1951ರ 125 ಎ ಪ್ರಕಾರ ಹಾಸನ ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳಬಹುದು. ಒಂದು ವೇಳೆ ಆಸ್ತಿ ವಿವರ ಬಚ್ಚಿಟ್ಟಿರುವುದು ದೃಢಪಟ್ಟರೆ ಅದು ಕ್ರಿಮಿನಲ್ ಅಪರಾಧ ಎಂದಾಗುತ್ತದೆ. ಇದರಿಂದ ಫಲಿತಾಂಶ ಪ್ರಕಟವಾದ ಬಳಿಕ ಪ್ರಮಾಣಪತ್ರ ನೀಡದೆ ಇರಲು ಅವಕಾಶವಿದೆ. ಒಂದು ವೇಳೆ ಪ್ರಜ್ವಲ್ ಚುನಾವಣೆಯಲ್ಲಿ ಗೆದ್ದರೂ ಅನರ್ಹರಾಗಬಹುದು. ಆಗ ಎರಡನೆಯ ಅತಿ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿ ವಿಜಯಶಾಲಿ ಎಂದು ಘೋಷಣೆ ಮಾಡಲಾಗುತ್ತದೆ. ತಪ್ಪೆಸಗಿರುವುದು ದೃಢಪಟ್ಟರೆ ಶಿಕ್ಷೆಗೆ ಗುರಿಯಾಗಬಹುದು.
ತಮ್ಮ ಬಳಿ 7,39,21,662 ರೂಪಾಯಿ ಆಸ್ತಿ ಇದೆ ಎಂದು ಪ್ರಜ್ವಲ್ ಘೋಷಿಸಿದ್ದರು. 1,100 ಗ್ರಾಂ ಚಿನ್ನ, 23 ಕೆಜಿ ಬೆಳ್ಳಿ ಸೇರಿದಂತೆ 37,31,350 ರೂಪಾಯಿ ಮೌಲ್ಯದ ಚಿನ್ನಾಭರಣವಿದೆ. ಎರಡು ಎತ್ತು, 18 ಹಸು ಸಹಿತ 4,45,000 ಮೌಲ್ಯದ ಜಾನುವಾರುಗಳಿವೆ. ಮೈಸೂರಿನಲ್ಲಿ 1.90 ಕೋಟಿ ಮೌಲ್ಯದ ವಾಣಿಜ್ಯ ಸಂಕೀರ್ಣವಿದೆ. ಹಾಸನ, ದುದ್ದ, ಕಸಬಾ, ಹೊಳೆನರಸೀಪುರದಲ್ಲಿ 4.89 ಕೋಟಿ ರೂ ಮೌಲ್ಯದ ಜಮೀನು ಹೊಂದಿದ್ದಾರೆ.
ಏಳು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾಲೀಕರಾಗಿದ್ದರೂ ಪ್ರಜ್ವಲ್ ರೇವಣ್ಣ, ಅಷ್ಟೇ ಸಾಲವೂ ಇದೆ ಎಂದಿದ್ದಾರೆ. ತಾಯಿ ಭವಾನಿ ಅವರಿಂದ 43,75,000 ರೂಪಾಯಿ, ತಂದೆ ರೇವಣ್ಣ ಅವರಿಂದ 1,26,000 ರೂ., ತಾತ ದೇವೇಗೌಡರಿಂದ 5 ಲಕ್ಷ ರೂ. ಅತ್ತೆ ಅನಸೂಯ ಮಂಜುನಾಥ್ ಅವರಿಂದ 22 ಲಕ್ಷ ಹಾಗೂ ಅತ್ತೆ ಶೈಲಾ ಅವರಿಂದ 10,50,000 ರೂ. ಸಾಲ ಪಡೆದಿರುವುದಾಗಿ ತಿಳಿಸಿದ್ದರು. ಅಜ್ಜಿ ಚನ್ನಮ್ಮ ಅವರಿಗೆ 23 ಲಕ್ಷ ರೂ, ಸಹೋದರ ಸೂರಜ್‌ಗೆ 37,29,000 ರೂ ಮತ್ತು ಸನ್ ಡ್ರೈ ಕಂಪೆನಿಗೆ 25 ಲಕ್ಷ ರೂ ಸಾಲ ನೀಡಿದ್ದಾರೆ. 26,99,848 ರೂ. ನಗದು ಇದೆ ಎಂದು ತಿಳಿಸಿದ್ದರು.