ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಚಂದ್ರಯಾನ-3ರ ಬಗ್ಗೆ ವ್ಯಂಗ್ಯ ಮಾಡಿದ್ದ ಹಿರಿಯ ನಟ, ನಿರ್ದೇಶಕ ಪ್ರಕಾಶ್ ರಾಜ್ ವಿರುದ್ಧ ಬಗಲಕೋಟೆಯಲ್ಲಿ ದೂರು ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಠಾಣೆಯಲ್ಲಿ ಹಿಂದೂ ಸಂಘಟನೆ ಮುಖಂಡರು ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಚಂದ್ರಯಾನವನ್ನು ವ್ಯಂಗ್ಯವಾಡುವ ಮೂಲಕ ದೇಶಕ್ಕೆ ಅಪಮಾನ ಮಾಡಿರುವ ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಟ ಪ್ರಕಾಶ್ ರಾಜ್, ಚಂದ್ರಯಾನದ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ ಅವರನ್ನು ಹೋಲುವಂತಹ ವ್ಯಕ್ತಿಯೊಬ್ಬರು ಚಂದ್ರನ ಮೇಲಿಂದ ಚಹಾ ಸುರಿಯುತ್ತಿರುವ ವ್ಯಂಗ್ಯಚಿತ್ರದ ಫೋಟೋವನ್ನು ಹಾಕಿ ಬ್ರೇಕಿಂಗ್ ನ್ಯೂಸ್…ಚಂದ್ರನ ಅಂಗಳದಿಂದ ವಿಕ್ರಮ್ ಲ್ಯಾಂಡರ್ ನಿಂದ ಮೊದಲ ಚಿತ್ರ…ವ್ಹಾವ್ ಎಂದು ಬರೆದುಕೊಂಡಿದ್ದರು. ಚಂದ್ರಯಾನ ಯಶಸ್ಸಿಗೆ, ನಮ್ಮ ಇಸ್ರೋ ವಿಜ್ಞಾನಿಗಳ ಶ್ರಮ ಯಶಸ್ವಿಯಾಗಲೆಂದು ಇಡೀ ದೇಶ ಪ್ರಾರ್ಥಿಸುತ್ತಿರುವ ಈ ಸಂದರ್ಭದಲ್ಲಿ ಹಿರಿಯ ನಟ, ನಿರ್ದೇಶಕ ಚಂದ್ರಯಾನದ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಹಿಂದೂ ಸಂಘಟನೆ ಮುಖಂಡರು ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.
ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ನಾಳೆ ಸಂಜೆ 6:4ಕ್ಕೆ ಚಂದ್ರನ ಅಂಗಳಕ್ಕೆ ಇಳಿಯಲಿದ್ದು, ಸಾಫ್ಟ್ ಲ್ಯಾಂಡಿಂಗ್ ಗೆ ಕೌಂಟ್ ಡೌನ್ ಶುರುವಾಗಿದೆ. ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಇಳಿಯಲಿ ಎಂದು ಬೆಂಗಳೂರು ಸೇರಿದಂತೆ ದೇಶಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ