Latest

ವಾಲ್ಮೀಕಿ ಸಮುದಾಯದ ಮೀಸಲಾತಿ ಹೋರಾಟ ಬೆಂಗಳೂರಿಗಷ್ಟೇ ಸೀಮಿತವಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವೂ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ ಹರಿಹರ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬೆಂಗಳೂರಿಗೆ ಮಾತ್ರ ಈ ಹೋರಾಟ ಸೀಮಿತವಾಗುವುದು ಬೇಡ. ಪ್ರತಿ ಜಿಲ್ಲೆಗಳಲ್ಲಿಯೂ ಹೋರಾಟ ನಡೆಯಲಿ. ಇದಕ್ಕೆ ನನ್ನ ಬೆಂಬಲವೂ ಇದೆ. ಈಗಾಗಲೇ ವಾಲ್ಮೀಕಿ ಸಮಾಜದ ಜನಾಂಗಕ್ಕೆ ಈ ಕುರಿತು ತಿಳಿವಳಿಕೆ ಮೂಡಿದ್ದು, ಮುಂದೊಂದು ದಿನ ಹೋರಾಟಕ್ಕೆ ನ್ಯಾಯ ಸಿಗಲಿದೆ. ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಸಿಗುವ ವರೆಗೆ ಪ್ರತಿ ಅಧಿವೇಶನ ಸಂದರ್ಭದಲ್ಲಿ ಹೋರಾಟ ನಡೆಯಲಿ ಎಂದು ಕರೆ ನೀಡಿದರು.

ಹರಿಹರ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಮಾತನಾಡಿ, ಯಡಿಯೂರಪ್ಪನವರು ಕಳೆದ ಬಾರಿ ಜಾತ್ರೆಗೆ ಬಂದಾಗ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಬಂದ ಕೂಡಲೇ ನಾನು ನಿಮ್ಮ ಸಮುದಾಯಕ್ಕೆ 7. 5 ಮೀಸಲಾತಿ ಮಾಡಿಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಆದರೆ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ವರದಿ ನೀಡಿದ್ದರೂ ಸರ್ಕಾರ ಮಾತ್ರ ನಮ್ಮ ಭರವಸೆ ಈಡೇರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚಳ್ಳಿಕೇರಿ ಶಾಸಕ ಟಿ.ರಘುಮೂರ್ತಿ ಶ್ರೀಗಳ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಇದಕ್ಕೂ ಮುನ್ನ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರನ್ನು ಸಚಿವ ಶ್ರೀರಾಮುಲು ಭೇಟಿ ನೀಡಿ, ಮೀಸಲಾತಿ ಕುರಿತು ಚರ್ಚೆ ನಡೆಸಿ, ಈ ಹೋರಾಟದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಹಿರಿಯ ಪತ್ರಕರ್ತ ರವೀಂದ್ರ ಭಟ್ಟರಿಗೆ ರಾಜ್ಯ ಮಟ್ಟದ ಮಾಧ್ಯಮ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button