ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಸಿನಿಮೀಯ ಮಾದರಿಯಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತೌಫೀಲ್ ಎಂದು ಗುರುತಿಸಲಾಗಿದೆ.
ಎನ್ಐಎ ಅಧಿಕಾರಿಗಳು ಶನಿವಾರ ರಾತ್ರಿ 9.30ರ ಸುಮಾರಿಗೆ ಆರೋಪಿಯನ್ನು ವಶಕ್ಕೆ ಪಡೆದರು.
ಸುಮಾರು 10ಕ್ಕೂ ಹೆಚ್ಚು ಎನ್ಐಎ ಅಧಿಕಾರಿಗಳಿದ್ದ ತಂಡ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿಯಲ್ಲಿತೌಫಿಲ್ ಮನೆ ಬಳಿಗೆ ಹೋಗಿ ಹೊರಗಿನಿಂದಲೇ ಪರಿಶೀಲಿಸಿತ್ತು. ಇಬ್ಬರು ಅಧಿಕಾರಿಗಳು ಪ್ಲಂಬರ್ ಗಳಂತೆ ನಟಿಸಿ ಕೈಯಲ್ಲಿ ರೆಂಚ್ ಹಿಡಿದು ಮನೆ ಒಳಗೆ ಪ್ರವೇಶಿಸಿದಾಗ ಮಾಂಸ ಕತ್ತರಿಸುವ ಕೆಲಸದಲ್ಲಿ ನಿರತನಾಗಿದ್ದ ಆರೋಪಿ ಅಧಿಕಾರಿಗಳ ಮೇಲೆ ಕತ್ತಿಯಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ತಂಡದ ಇತರ ಅಧಿಕಾರಿಗಳು ಒಳಗೆ ನುಗ್ಗಿ ಆರೋಪಿಯನ್ನು ವಶಕ್ಕೆ ಪಡೆದರು.
ಆರೋಪಿ ಪತ್ತೆಗೆ ಎನ್ಐಎ 5 ಲಕ್ಷ ಬಹುಮಾನ ಘೋಷಿಸಿತ್ತು. ವಿಚಾರಣೆ ಮುಂದುವರಿದಿದ್ದು ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗಗೊಳ್ಳುವ ಸಾಧ್ಯತೆಗಳಿವೆ.
2022ರ ಜು.26ರಂದು ಪ್ರವೀಣ ನೆಟ್ಟಾರು ಅವರನ್ನು ಅವರ ಕೋಳಿ ಅಂಗಡಿಗೆ ನುಗ್ಗಿ ತಂಡವೊಂದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ