ಪ್ರಗತಿವಾಹಿನಿ ಸುದ್ದಿ, ಗದಗ – ಬರುವ ಸೋಮವಾರ ದಿನಾಂಕ ೧೩ ರಂದು ಸಂಜೆ ೭ ಗಂಟೆಗೆ ಸಮಸ್ತ ವೀರಶೈವ ಲಿಂಗಾಯತ ಸಮುದಾಯದವರು ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ವಿಭೂತಿ ಧಾರಣೆ ಮಾಡಿ ಇಷ್ಟಲಿಂಗ ಪೂಜೆಯೊಂದಿಗೆ ಮಹಾಮಾರಿ ಕೊರೋನಾ ಹಾವಳಿಯಿಂದ ವಿಶ್ವವನ್ನು ಮುಕ್ತಗೊಳಿಸುವ೦ತೆ ಪ್ರಾರ್ಥಿಸಬೇಕೆಂದು ಗದುಗಿನ ತೋಂಟದ ಜಗದ್ಗುರು ಡಾ ತೋಂಟದ ಸಿದ್ದರಾಮ ಸ್ವಾಮೀಜಿಯವರು ವೀರಶೈವ ಲಿಂಗಾಯತ ಸಮಾಜದವರಿಗೆ ಮನವಿ ಮಾಡಿದ್ದಾರೆ .
ಈ ಮಹತ್ ಕಾರ್ಯದಲ್ಲಿ ವೀರಶೈವ ಲಿಂಗಾಯತ ಸಮಾಜದ ವಿವಿಧ ಮಠಾಧೀಶರಾದ ಸುತ್ತೂರು ಶ್ರೀಗಳು, ತಮುಕೂರಿನ ಸಿದ್ದಗಂಗಾ ಮಠಾಧೀಶರು, ಚಿತ್ರದುರ್ಗದ ಬೃಹನ್ ಮಠ, ಹುಬ್ಬಳ್ಳಿ ಸಿದ್ದಾರೂಠ ಹಾಗೂ ಮೂರು ಸಾವಿರ ಮಠ, ಚಿತ್ರದುರ್ಗದ ಸಾಣೆಹಳ್ಳಿ ಮಠ, ಕೂಡಲ ಸಂಗಮ ಪಂಚಮಸಾಲಿ ಪೀಠ, ಧಾರವಾಡದ ಮುರುಗಾಮಠ, ಬೆಳಗಾವಿಯ ನಾಗನೂರು ಮಠ, ಗದಗಿನ ತೋಂಟದಾರ್ಯ ಮಠ, ಕಲಬುರಗಿಯ ಶರಣ ಬಸಪ್ಪ ಅಪ್ಪಗಳ ಮಹಾಸಂಸ್ಥಾನ ಹಾಗೂ ಬೀದರ ನ ಭಾಲ್ಕಿ ಮಠಗಳ ಪೀಠಾಧ್ಯಕ್ಷರು ಪಾಲ್ಗೊಳ್ಳುತ್ತಿದ್ದಾರೆ.
ವೀರಶೈವ ಲಿಂಗಾಯತ ಸಮಾಜದ ಸರ್ವ ಗುರುವರ್ಯರು ಹಾಗೂ ಕುಟುಂಬಸ್ಥರು ಏಪ್ರಿಲ್ ೧೩ ರಂದು ಸಂಜೆ ೭ ಗಂಟೆಗೆ ತಮ್ಮ ಮನೆಗಳಲ್ಲಿಯೇ ಕುಟುಂಬ ಸಮೇತರಾಗಿ ಇಷ್ಟ ಲಿಂಗ ಪೂಜೆ ಮಾಡುವ ಮೂಲಕ ಕೊರೋನಾ ವಿರುದ್ದದ ಹೋರಾಟದಲ್ಲಿ ಸಹಕರಿಸಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಎಲ್ಲಾ ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರಕಟಣೆ ಹೊರಡಿಸಿದೆ.
ದೇಶ ಎದುರಿಸುತ್ತಿರುವ ಮಹಾಮಾರಿಯ ವಿರುದ್ಧ ಹೋರಾಟದಲ್ಲಿ ಜಾತಿ, ಧರ್ಮ, ಭಾಷೆ ಎಲ್ಲವನ್ನೂ ಮೀರಿ ಏಕತೆಯನ್ನು ಪ್ರದರ್ಶಿಸುವ ಅವಶ್ಯಕತೆ ಇದೆ. ಮಹಾಮಾರಿ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು, ವೈದ್ಯಕೀಯ ಸಿಬ್ಬಂದಿ ಇನ್ನಿತರ ಅಧಿಕಾರಿ ವರ್ಗದವರಿಗೆ ನೈತಿಕ ಬೆಂಬಲ ಸೂಚಿಸುವ ಅಗತ್ಯವಿದೆ . ವೈರಾಣು ಹರಡದಂತೆ ತಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಎಲ್ಲ ಕ್ರಮಗಳನ್ನು ನಾವೆಲ್ಲ ಚಾಚೂ ತಪ್ಪದೇ ಅನುಸರಿಸುವ ಅಗತ್ಯ ಇದೆ . ಅನಗತ್ಯವಾಗಿ ಮನೆಯಿಂದ ಹೊರ ಬೀಳದೆ ಮನೆಯಲ್ಲೇ ಉಳಿದು ಸರಕಾರವನ್ನು ಬೆಂಬಲಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಈ ಹೋರಾಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಸದುದ್ದೇಶದಿಂದ ಸಮಾಜದ ಸಮಸ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಡಾ; ಸಿದ್ದರಾಮ ಸ್ವಾಮೀಜಿ ಅವರು ಕೋರಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ